ಮುಂಬೈ ನರಮೇಧ ಹಾಗೂ ಗಾಜಾ ಕಾಳಗದ ಹಿನ್ನೆಲೆಯಲ್ಲಿ ವಿಶ್ವದ ಎಲ್ಲಾ ಭಾಗದ ಹಿಂದೂ, ಮುಸ್ಲಿಂ, ಯಹೂದಿ ಮತ್ತು ಕ್ರೈಸ್ತ ಕಲಾವಿದರ ಕೂಡುವಿಕೆಯಲ್ಲಿ ಅಪರೂಪದ ಸಂಗೀತ ಕಾರ್ಯಕ್ರಮ ಒಂದು ಇಲ್ಲಿ ನಡೆಯಿತು.
ಜೈಪುರ ಸಾಹಿತ್ಯ ಹಬ್ಬದಂಗವಾಗಿ ನಡೆಯುತ್ತಿರುವ ಸರಣಿ ಕಾರ್ಯಕ್ರಮದಲ್ಲಿ ಲಂಡನ್ ಮೂಲದ ಕೊಎಗ್ಸಿಸ್ಟ್ ಪ್ರತಿಷ್ಠಾನವು ಎಲ್ಲಾ ಕಲಾವಿದರನ್ನು ಒಟ್ಟು ಮಾಡಿದ್ದು, ವಿಶ್ವಾಸದ ಮೇಲೆ ಯಾವುದೇ ಶಕ್ತಿಗಳು ಸವಾರಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಪ್ರಸ್ತುತಪಡಿಸಲಾಯಿತು.
ಮುಂಬೈದಾಳಿ ಮತ್ತು ಗಾಜಾಯುದ್ಧವು ಅಂತರ್-ವಿಶ್ವಾಸದ ಸಂಬಂಧಗಳ ಮೇಲೆ ನೇರಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಕಲಾವಿದರನ್ನು ಒಟ್ಟು ಸೇರಿಸಲಾಗಿದೆ ಎಂದು ಪ್ರತಿಷ್ಠಾನದ ವಕ್ತಾರ ಸೈಮನ್ ಕೊಹೆನ್ ಹೇಳಿದ್ದಾರೆ.
ಈ ಕಾರ್ಯಕ್ರಮದ ಮೂಲಪರಿಕಲ್ಪಕರಾಗಿರುವ ಜೈಪುರ ಸಾಹಿತ್ಯ ಹಬ್ಬದ ನಿರ್ದೇಶಕ ವಿಲಿಯಂ ದರ್ಲಿಂಪ್ಲೆ ಅವರು ವಿಧ್ವಂಸಕ ಕಾರ್ಯಗಳನ್ನ ನಡೆಸುವ ಶಕ್ತಿಗಳ ವಿರುದ್ಧ ಇದೊಂದು ಕಾರ್ಯ ಎಂದು ಹೇಳಿದರು.
ಮುಂಬೈದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರನ್ನು ನಿಷೇಧಿಸಬೇಕೆಂಬ ಹುಯಿಲೆದ್ದಿತ್ತು. ಆದರೆ ಹಾಗೆ ಮಾಡಿದಲ್ಲಿ ಮೂಲಭೂತವಾದಿಗಳು ನಿಜವಾಗಿಯೂ ಗೆದ್ದಂತಾಗುತ್ತದೆ ಎಂದು ವಿಲಿಯಂ ಹೇಳಿದರು. |