"ಭಾರತದ ಉದರದೊಳಗಿರುವ ವ್ರಣವನ್ನು ಕತ್ತರಿಸಿ ಹಾಕುವ ಬದಲಿಗೆ, ಪ್ರಸಕ್ತ ಆಡಳಿತಗಾರರು ಅದು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತಿದ್ದಾರೆ" ಎಂದು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಹೇಳಿದ್ದಾರೆ.
ಶುಕ್ರವಾರ 83ನೆ ಹರೆಯಕ್ಕೆ ಕಾಲಿರಿಸಿದ ಠಾಕ್ರೆ, ಶಿವಸೇನೆಯ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ "ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಮತ್ತು ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ. ಇಂದು ಪಾಕಿಸ್ತಾನಕ್ಕೆ ಭಾರತದ ಮೇಲೆ ಭಯವಿಲ್ಲ. ಯಾಕೆಂದರೆ, ರಾಷ್ಟ್ರದೊಳಗಿರುವ ಮೂಲಭೂತವಾದಿ ಮುಸ್ಲಿಮರು ನಮ್ಮ ಶತ್ರು ನೆರೆರಾಷ್ಟ್ರದ ಬಲ" ಎಂಬುದಾಗಿ ದೂರಿದ್ದಾರೆ.
"ಮುಂಬೈದಾಳಿಯಲ್ಲಿ ಹರಿದ ನೆತ್ತರಿನ್ನು ಆರಿಲ್ಲ. ಶೇರುಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ತಾಜ್ ಪುನಾರಂಭಗೊಂಡಿದೆ. ಆದರೆ, ಸಾಮಾನ್ಯ ಮುಂಬೈಗನೊಬ್ಬ ಇಂದು ಜೀವಭಯದೊಂದಿಗೆ ತನ್ನ ದೈನಂದಿನ ಕಾಯಕಕ್ಕಾಗಿ, ಲೋಕಲ್ ಟ್ರೇನ್‌ಗಳಲ್ಲಿ, ಜನದಟ್ಟಣೆಯ ಬಜಾರ್‌ಗಳಲ್ಲಿ ಇಲ್ಲವೇ ಬಸ್‌ಗಳಲ್ಲಿ ತೆರಳುತ್ತಿದ್ದಾನೆ" ಎಂದವರು ಹೇಳಿದ್ದಾರೆ.
"ಆದರೆ, ರಾಷ್ಟ್ರದೊಳಗಿನ ಇಸ್ಲಾಮಿಕ್ ಮೂಲಭೂತವಾದಿಕರಣದ ವಿರುದ್ಧ ಹೋರಾಡುತ್ತಿರುವವರನ್ನು ನಮ್ಮ ಆಡಳಿತಗಾರರು ಹಿಂದೂ ಭಯೋತ್ಪಾದರು ಎಂದು ಕರೆಯುತ್ತಾರೆ" ಎಂದು ಅವರು ಕಿಡಿಕಾರಿದ್ದಾರೆ. |