ಸಾರ್ವಜನಿಕವಾಗಿ ಕಿರಿಕಿರಿ ಉಂಟುಮಾಡುವ ಬೀದಿನಾಯಿಗಳನ್ನು ಕೊಂದು ಹಾಕಲು ಮಹಾರಾಷ್ಟ್ರ ನಗರಪಾಲಿಕೆಗಳಿಗೆ ಅನುಮತಿ ನೀಡುವ ಮುಂಬೈ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.ಜನವರಿ 29ರ ತನಕ ಅಮಾನತ್ತು ಮಾಡಲಾಗಿದ್ದ ತೀರ್ಪಿಗೆ ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠವು ಈ ತಡೆಯಾಜ್ಞೆ ನೀಡಿದೆ. ಬೀದಿನಾಯಿಗಳನ್ನು ಕೊಂದು ಹಾಕುವಂತೆ ಆದೇಶ ನೀಡಲು ಹೇಗೆ ಸಾಧ್ಯವಾಯಿತು ಎಂಬುದಾಗಿ ಇಬ್ಬರು ಹಿರಿಯ ವಕೀಲರಾದ ಫಾಲಿ ಎಸ್. ನಾರಿಮನ್ ಹಾಗೂ ಟಿ.ಆರ್.ಅಂಧ್ಯಾರುಜಿನ ಅವರುಗಳು ಸಮರ್ಥವಾಗಿ ಮಂಡಿಸಿರುವ ವಾದದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ." ನಾಯಿಯೊಂದು ಬೊಗಳುತ್ತದೆ ಎಂಬ ಕಾರಣಕ್ಕಾಗಿ ಅದನ್ನು ಕೊಲ್ಲಲಾಗದು" ಎಂಬುದಾಗಿ ಹೇಳಿರುವ ನಾರಿಮನ್, ಬೀದಿ ನಾಯಿ ಆಶ್ರಯಕ್ಕಾಗಿ ಸಾಕಷ್ಟು ಮಾರ್ಗಸೂಚಿಗಳಿವೆ ಎಂದು ಹೇಳಿದರು.ಪಿ.ಸದಾಶಿವನ್ ಅವರನ್ನೊಳಗೊಂಡಿದ್ದ, ನ್ಯಾಯಪೀಠವು, ಬೀದಿನಾಯಿಯು ಹಲವು ಮಂದಿಗೆ ಕಚ್ಚಬಹುದು ಎಂದು ಹೇಳಿದರೆ, ನಾರಿಮನ್ ಅವರು ಇಂತಹ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಬೇಕು ಎಂಬುದು ಅತಿಪ್ರಾಮುಖ್ಯ ಎಂದು ವಾದಿಸಿದರು.ಪ್ರಾಣಿಗಳ ವಿರುದ್ಧದ ಕ್ರೌರ್ಯವನ್ನು ತಡೆಯುವ ಸರ್ಕಾರಿ ನೋಡಲ್ ಸಂಸ್ಥೆಯಾಗಿರುವ ಭಾರತೀಯ ಪಶುಕಲ್ಯಾಣ ಮಂಡಳಿಯು ಹೈಕೋರ್ಟಿನ ತೀರ್ಪನ್ನು, ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಗೋವಾ ಮೂಲದ ಪೀಪಲ್ಸ್ ಫಾರ್ ಎಲಿಮಿನೇಶನ್ ಆಫ್ ಸ್ಟ್ರೇ ಟ್ರಬಲ್ಸ್ ಎಂಬ ಸಂಸ್ಥೆಯು, ಬೀದಿನಾಯಿಗಳನ್ನು ಕೊಲ್ಲಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು.ಬೀದಿನಾಯಿಗಳಿಂದಾಗುವ ತೊಂದರೆಯನ್ನು ಹೈಕೋರ್ಟ್ ವ್ಯಾಖ್ಯಾನಿಸಿಲ್ಲ, ಮತ್ತು ನಾಯಿಗಳನ್ನು ಸಾಮೂಹಿಕವಾಗಿ ಕೊಲ್ಲಬೇಕಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ. |