ಜಮ್ಮು ಕಾಶ್ಮೀರ ವಿವಾದಕ್ಕೂ ಮುಂಬೈದಾಳಿಗು ತಳುಕು ಹಾಕುವ ತಪ್ಪು ಮಾಡಬೇಡಿ ಎಂಬುದಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಹೇಳಿದ್ದಾರೆ.ಅಫ್ಘಾನ್ ವಿದೇಶಾಂಗ ಸಚಿವ ರಂಗೀನ್ ದಡ್ಫಾರ್ ಸ್ಪಾಂತಾ ಅವರೊಂದಿಗೆ ಕಾಬೂಲ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಮುಂಬೈ ಭಯೋತ್ಪಾದನೆಯು ಜಾಗತಿಕ ಭಯೋತ್ಪಾದನೆಯ ಪರಿಣಾಮ ಎಂದು ಹೇಳಿದ್ದಾರೆ." ಈ ದಾಳಿಗಳು(ಮುಂಬೈ) ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ಸಂಪರ್ಕಿತವಾಗಿಲ್ಲ, ಇದು ಜಾಗತಿಕ ಭಯೋತ್ಪಾದನೆಯ ಒಂದು ಭಾಗವಾಗಿದೆ. ಇದನ್ನು ಜಾಗತಿಕ ದಾಳಿ ಎಂಬುದಾಗಿಯೇ ಅಂತಾರಾಷ್ಟ್ರೀಯ ಸಮುದಾಯ ಪರಿಗಣಿಸಬೇಕು ಮತ್ತು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು" ಎಂದು ಹೇಳಿದ ಅವರು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಮತ್ತು ಅಲ್ಲಿನ ಜನತೆ ಇತ್ತೀಚಿನ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತದಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.ಪ್ರತ್ಯೇಕತಾವಾದಿಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ, ಜನತೆ ಚುನಾವಣೆಯಲ್ಲಿ ಭಾಗವಹಿಸಿದ್ದು ಒಟ್ಟು ಶೇ.61.5ರಷ್ಟು ಮತದಾನವಾಗಿದೆ." ಯಾವುದೇ ಕಾರಣಕ್ಕೂ ಭಯೋತ್ಪಾದನೆಯ ರೂವಾರಿಗಳನ್ನು ಇದರ ಬಲಿಪಶುಗಳಿಗೆ ಸಮೀಕರಿಸಬಾರದು ಎಂದು ಅಫ್ಘಾನಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧ ಹೋರಾಟ ಪರಿಪೂರ್ಣವಾಗಿರಬೇಕು. ಭಯೋತ್ಪಾನೆಯ ರೂವಾರಿಗಳನ್ನು ಇದರ ಬಲಿಪಶುಗಳಿಗೆ ಸಮೀಕರಿಸಬಾರದು, ಕೆಲವೊಮ್ಮೆ ಇಂತಹವುಗಳು ನಡೆಯುತ್ತವೆ. ಈ ಪ್ರವೃತ್ತಿ ಕಡಿಮೆಯಾಗಬೇಕು. ಭಯೋತ್ಪಾದನೆಯ ರೂವಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು" ಎಂದು ಅವರು ಒತ್ತಾಯಿಸಿದರು.ಶಿಮ್ಲಾ ಒಪ್ಪಂದ, ಲಾಹೋರ್ ಒಪ್ಪಂದ ಹಾಗೂ ಇತರ ಎಲ್ಲಾ ದ್ವಿಪಕ್ಷೀಯ ಯಂತ್ರಗಳ ಪ್ರಕಾರ ಇತ್ಯರ್ಥವಾಗದಿರುವ ಎಲ್ಲಾ ವಿಚಾರಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಒಪ್ಪಿಕೊಂಡಿವೆ ಎಂದು ಪ್ರಣಬ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು. |