ಲಂಚಕ್ಕಾಗಿ ಬಾಯಿಬಾಯಿ ಬಿಡುವವರ ಪಟ್ಟಿಯಲ್ಲಿ ಕಾನೂನುಪಾಲನೆಯ ಕರ್ತವ್ಯಕ್ಕಾಗಿ ನಿಯೋಜನೆಗೊಳಪಡುವ ಪೊಲೀಸರು ಮುಂಚೂಣಿಯಲ್ಲಿದ್ದಾರೆ ಎಂಬುದಾಗಿ ಸಮೀಕ್ಷೆಯೊಂದು ಹೇಳುತ್ತದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಹಕರಿಸುತ್ತಿರುವ ಟ್ರೇಸ್ ಇಂಟರ್‌ನ್ಯಾಶನಲ್ ಎಂಬ ಸಂಸ್ಥೆಯು ನಡೆಸಿರುವ ಈ ಸಮೀಕ್ಷೆಯಲ್ಲಿ ಶೇ.91ರಷ್ಟು ಲಂಚದ ಬೇಡಿಕೆಯು ಒಟ್ಟಾರೆ ಸರ್ಕಾರಿ ಅಧಿಕಾರಿಗಳಿಂದ ಮಾಡಲ್ಪಡುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಪೊಲೀಸರದ್ದು ಶೇ.30ರಷ್ಟು ಪಾಲು. ರಾಷ್ಟ್ರಮಟ್ಟದ ಸರ್ಕಾರಿ ಅಧಿಕಾರಿಗಳ ಪಾಲು ಶೇ.33.
ತೊಂದರೆ ಅಥವಾ ಅನಾನುಕೂಲತೆಗಳನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಲಂಚದಬೇಡಿಕೆ ಇರಿಸಲಾಗುತ್ತದೆ. ಇದರಲ್ಲಿ ಲಂಚಕ್ಕಾಗಿ ಪೀಡಿಸುವವರಲ್ಲಿ ಹೆಚ್ಚಿನವರು ಪೊಲೀಸರು.
ಲಂಚ ಬೇಡುವ ರಾಷ್ಟ್ರೀಯ ಮಟ್ಟದ ಅಧಿಕಾರಿಗಳಲ್ಲಿ ಶೇ.13 ರಷ್ಟು ಬೇಡಿಕೆಯು ಸುಂಕ ಕಚೇರಿ ಮತ್ತು ತೆರಿಗೆ ಕಚೇರಿಗಳಿಂದ ಬಂದಿರುತ್ತದೆ. ಹಾನಿ ಮತ್ತು ಅನಾನುಕೂಲಗಳನ್ನು ತಪ್ಪಿಸಿಕೊಳ್ಳಲು ಶೇ.77ರಷ್ಟು ಮಂದಿ ಲಂಚ ನೀಡುತ್ತಾರೆ. ಇದರಲ್ಲಿ ಶೇ.51ಕ್ಕಿಂತಲೂ ಅಧಿಕ ಮಂದಿ, ಸೇವೆಯೊಂದನ್ನು ನೀಡಲು ನಿಯೋಜಿತವಾಗಿರುವ ವ್ಯಕ್ತಿ ತನ್ನ ಕಾರ್ಯವನ್ನು ನಿರ್ವಹಿಸಲು (ಕಸ್ಟಮ್ಸ್ ಕ್ಲಿಯರಿಂಗ್ ಅಥವಾ ದೂರವಾಣಿ ಅಳವಡಿಕೆ ಮುಂತಾದ) ಲಂಚ ನೀಡುತ್ತಾರೆ.
ಶೇ.12ರಷ್ಟು ಲಂಚಪ್ರಕರಣಗಳು ಅನುಕೂಲ ಪಡೆಯಲು ಮಾಡಲ್ಪಡುತ್ತವೆ. ಇದರಲ್ಲಿ ಇತರ ಸರ್ಕಾರಿ ಅಧಿಕಾರಿ ಮೇಲೆ ಪ್ರಭಾವ ಬೀರಲು, ಹೊಸ ವ್ಯಾಪಾರ ಪಡೆಯಲು ಒಲವಿಗಾಗಿ ನಡೆಯುತ್ತವೆ. ಉಳಿದ ಶೇ.11ರಷ್ಟು ಲಂಚದ ಬೇಡಿಕೆಗಳ ಉದ್ದೇಶವು ನಿರ್ದಿಷ್ಟವಾಗಿಲ್ಲ.
ಇದರಲ್ಲಿ ಭಾಗವಹಿಸಿರುವವರ ಸುಮಾರು ಅರ್ಧದಷ್ಟು ಮಂದಿ ಹೇಳುವ ಪ್ರಕಾರ ಒಂದಕ್ಕಿಂತ ಹೆಚ್ಚಿನ ಸರ್ತಿ ಇವರ ಬಳಿ ಲಂಚಕ್ಕಾಗಿ ಬೇಡಿಕೆ ಇರಿಸಲಾಗಿದೆ. ಶೇ.9 ಮಂದಿ ಹೇಳುವಂತೆ 100ಕ್ಕಿಂತಲೂ ಹೆಚ್ಚು ಬಾರಿ ಇಂತಹ ಬೇಡಿಕೆಗಳನ್ನು ಮಾಡಲಾಗಿದೆ.
ಭಾರತದಲ್ಲಿ ಲಂಚದ ಬೇಡಿಕೆ ಕುರಿತಂತೆ 2007ರ ಜುಲೈ 1ರಿಂದ 2008ರ ಅಕ್ಟೋಬರ್ 30ರ ತನಕ ಆನ್‌ಲೈನ್‌ನಲ್ಲಿ ಬಹುಭಾಷಾ ಟೂಲ್ ಮುಖಾಂತರ 96 ಅನಾಮಧೇಯರು ದಾಖಲಿಸಿರುವ ದೂರಿನಾಧಾರದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. |