ಪ್ರಸ್ತುತ ಬೈಪಾಸ್ ಸರ್ಜರಿಯಾಗಿ ಏಮ್ಸ್ ಆಸ್ಪತ್ರೆಯಲ್ಲಿ ಮಲಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾತ್ರ ಅಧಿಕಾರಾವಧಿಯಲ್ಲಿ ಆರೋಗ್ಯ ಸಮಸ್ಯೆ ಎದುರಿಸಿದವರಲ್ಲ. ಭಾರತ ಕಂಡ ಮೊತ್ತ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಸೇರಿದಂತೆ ಈ ಹಿಂದಿನ ನಾಲ್ಕು ಪ್ರಧಾನಿಗಳು ಇಂತಹುದೇ ಸಮಸ್ಯೆಯನ್ನು ಎದುರಿಸಿದ್ದರು.
ಇವರಲ್ಲಿ ಇತ್ತೀಚಿನವರೆಂದರೆ, ಎನ್‌ಡಿಎ ಸರ್ಕಾರದ ನೇತೃತ್ವ ವಹಿಸಿದ್ದ ಅಟಲ್ ಬಿಹಾರಿ ವಾಜಪೇಯಿ. ಮಂಡಿನೋವಿನಿಂದ ಬಳಲುತ್ತಿದ್ದ ಅವರಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಅಮೆರಿಕ ಮೂಲದ ವೈದ್ಯ ಚಿತ್ತರಂಜನ್ ಅವರು ವಾಜಪೇಯಿ ಅವರಿಗೆ ಶಸ್ತ್ರಕ್ರಿಯೆ ನಡೆಸಿದ್ದರು.
ರಾಷ್ಟ್ರದ 12ನೆ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹ ರಾವ್ ಅವರು ಅಮೆರಿಕದಲ್ಲಿ 1991ರಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು. ಅಂತೆಯೇ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸ್ವಲ್ಪಸಮಯದಲ್ಲೇ ಹೃದಯಾಘಾತಕ್ಕೆ ಈಡಾಗಿದ್ದರು. ಆ ವೇಳೆ ಅವರು ಚಿಕಿತ್ಸೆಗೆ ಒಳಗಾಗಿದ್ದರು.
ಇದರಿಂದಾಗಿ ಲಂಡನ್‌ನಲ್ಲಿ ನಡೆಯುತ್ತಿದ್ದ ಕಾಮನ್ವಲ್ತ್ ಪ್ರಧಾನ ಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸುವಿಕೆಯನ್ನು ರದ್ದು ಪಡಿಸಿದ್ದರು.
ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರೂ ಹೃದಯದ ಸಮಸ್ಯೆ ಎದುರಿಸಿದ್ದರು. 1964ರ ಜನವರಿಯಲ್ಲಿ ಕಾಂಗ್ರೆಸ್ ಅಧಿವೇಶನದ ವೇಳೆ ಅವರಿಗೆ ಹೃದಯಾಘಾತವಾಗಿತ್ತು. |