ಇತ್ತೀಚೆಗಷ್ಟೇ ಭಾರತೀಯ ಜನತಾಪಕ್ಷಕ್ಕೆ ರಾಜೀನಾಮೆ ನೀಡಿದ ಕಲ್ಯಾಣಸಿಂಗ್ ಬಗ್ಗೆ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು ವಿವಾದಿತ ಹೇಳಿಕೆ ನೀಡಿದ್ದು, 1992ರಲ್ಲಿ ಬಾಬರಿ ಮಸೀದಿಯನ್ನು ಕಲ್ಯಾಣ ಸಿಂಗ್ ಧ್ವಂಸಗೊಳಿಸಿದ್ದಲ್ಲ, ಅದಕ್ಕೆ ಅವರು ಹೊಣೆಯಲ್ಲ ಎಂಬುದಾಗಿಯೂ ಹೇಳಿದ್ದಾರೆ.ಬಿಜೆಪಿಯ ಮಾಜಿ ಮುಖಂಡರಾಗಿರುವ ಕಲ್ಯಾಣ್ ಸಿಂಗ್ ಅವರು ಮಸೀದಿ ಧ್ವಂಸದಂತಹ ಕೆಲಸ ಮಾಡಿಲ್ಲ, ಅವರನ್ನು ತೀವ್ರಗಾಮಿ ಎಂದು ಕರೆಯಬೇಡಿ. ಕಲ್ಯಾಣ್ ಸಿಂಗ್ ಅವರು ಮಸೀದಿ ಧ್ವಂಸ ಮಾಡಿದ್ದಲ್ಲ, ಆ ಕೆಲಸವನ್ನು ಮಾಡಿದವರು ಶಿವಸೇನೆ ಮತ್ತು ಆರ್‌ಎಸ್‌ಎಸ್ ಎಂಬುದಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.1992 ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಸಮಾಜವಾದಿ ಪಕ್ಷ ಹಾಗೂ ಇದೇ ಮುಲಾಯಂ ಸಿಂಗ್ ಅವರು, ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣಸಿಂಗ್ ಅವರ ಮೇಲೆ ಮುರಕೊಂಡು ಬಿದ್ದು, ತೀವ್ರ ವಾಗ್ದಾಳಿ ನಡೆಸಿದ್ದರು.ಆದರೆ ರಾಜಕಾರಣಿಗಳ ನಾಲಗೆಗೆ ಎಲುಬಿಲ್ಲ ಎಂಬುದು ಮುಲಾಯಂ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಲ್ಯಾಣ್ ಸಿಂಗ್ ಪ್ರಮುಖ ಆರೋಪಿಯಾಗಿದ್ದರು. ಆದರೆ ಬಿಜೆಪಿಯ ಉಪಾಧ್ಯಕ್ಷ ಹುದ್ದೆಗೆ ಕಲ್ಯಾಣ್ ಸಿಂಗ್ ರಾಜೀನಾಮೆ ನೀಡಿ, ಸಮಾಜವಾದಿ ಸಖ್ಯ ಬೆಳೆಸುತ್ತಿರುವ ಸಂದರ್ಭದಲ್ಲಿ ಮುಲಾಯಂ ರಾಗಬದಲಿಸತೊಡಗಿದ್ದಾರೆ.ಬಾಬರಿ ಮಸೀದಿ ಧ್ವಂಸವಾದಾಗ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರು ನೈತಿಕ ಹೊಣೆ ಹೊತ್ತು ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಿರುವುದಾಗಿಯೂ ಮುಲಾಯಂ ಸಮಜಾಯಿಷಿಕೆ ನೀಡಿದ್ದಾರೆ.ಕಲ್ಯಾಣ್ ಸಿಂಗ್ ಅವರು ಯಾವತ್ತೂ ಕಾರ್ಮಿಕ ಪರವಾಗಿರುವವರು, ಅವರು ಎಲ್ಲಾ ಪ್ರಗತಿಪರ ವಿಚಾರಗಳಿಗೆ ಬೆಂಬಲ ನೀಡುವವರು. ಆ ನೆಲೆಯಲ್ಲಿ ನಾವು ಅವರನ್ನು ಮೂಲಭೂತವಾದಿ ಎಂಬುದಾಗಿ ಕರೆಯಲಾರೆವು ಎಂದು ಮುಲಾಯಂ ಮುಲಾಮು ಹಚ್ಚಿದ್ದಾರೆ. |