ಶಸ್ತ್ರಧಾರಿ ನಕ್ಸಲರು ಒರಿಸ್ಸಾದಲ್ಲಿ ಮತ್ತೆ ದಾಂಧಲೆ ಎಬ್ಬಿಸಿದ್ದು, ಕಳೆದ ರಾತ್ರಿ ದಾಂತೆವಾಡ ಮತ್ತು ಕಾಂಕೆರ್ ಜಿಲ್ಲೆಗಳಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ನಿಲ್ಲಿಸಿದ್ದ 28 ಟ್ರಕ್ಕುಗಳು ಹಾಗೂ ವಾಹನಗಳನ್ನು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ.
ಕಿರಾಂದುಲ್ ಎಂಬಲ್ಲಿ ಪ್ರಮುಖ ರಸ್ತೆ ಗುತ್ತಿಗೆದಾರರ ಗ್ಯಾರೇಜ್‌ಗೆ ನುಗ್ಗಿದ ಶಸ್ತ್ರಾಸ್ತ್ರಧಾರಿ ನಕ್ಸಲರು ಅಲ್ಲಿ ನಿಲ್ಲಿಸಿದ್ದ 24 ವಾಹನಗಳಿಗೆ ಬೆಂಕಿ ಹಚ್ಚಿದರು. ಆ ಬಳಿಕ ಕಾಂಕೇರ್ ಎಂಬಲ್ಲಿ ನಾಲ್ಕು ಟಿಪ್ಪರ್‌ಗಳಿಗೆ ಕೂಡ ನಕ್ಸಲರು ಬೆಂಕಿ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗುತ್ತಿಗೆಗಾರ ಕೆ.ಎ.ಪಾಪ್‌ಚಂದ್ ಎಂಬವರ ಗ್ಯಾರೇಜಿಗೆ ಸುಮಾರು 400ರಷ್ಟಿದ್ದ ನಕ್ಸಲರ ತಂಡವು ಆಕ್ರಮಣ ಮಾಡಿತ್ತು. ಅಪಾಯದ ಅಲಾರಂ ಬಟನ್ ಒತ್ತಿದರೆ, ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಮೊದಲು ಗುತ್ತಿಗೆದಾರರ ಕುಟುಂಬ ಸದಸ್ಯರು ಮತ್ತು ನೌಕರರಿಗೆ ಬೆದರಿಕೆಯೊಡ್ಡಿದ ಬಳಿಕ ಈ ಕೃತ್ಯ ಎಸಗಿದ್ದರು.
ಗ್ಯಾರೇಜ್ ನೌಕರರು ಹಾಗೂ ಗುತ್ತಿಗೆದಾರರ ಕುಟುಂಬಿಕರಿಂದ ನಕ್ಸಲರು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡ ಬಳಿಕ ಅಲ್ಲಿದ್ದ ವಾಹನಗಳ ಇಂಧನದ ಟ್ಯಾಂಕ್‌ಗಳಿಗೆ ಹಾನಿ ಮಾಡಿ, ಅವುಗಳಿಗೆ ಬೆಂಕಿ ಹಚ್ಚಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. |