ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಉಗ್ರರೊಂದಿಗೆ ಕಾದಾಡಿ ವೀರಮರಣವನ್ನಪ್ಪಿದ ಬೆಂಗಳೂರಿನ ಎನ್‌ಎಸ್‌ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ 11 ಮಂದಿ ಭದ್ರತಾ ಸಿಬ್ಬಂದಿಯನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನವೆಂಬರ್ 26ರಂದು ನಡೆದ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳದ ವರಿಷ್ಠ ಹೇಮಂತ ಕರ್ಕರೆ, ಅಡಿಷನಲ್ ಕಮೀಷನರ್ ಅಶೋಕ ಕಮ್ಟೆ, ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ ಸಾಲಸ್ಕರ್, ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ತುಕಾರಾಮ್ ಓಂಬಳೆ ಹಾಗೂ ಹವಿಲ್ದಾರ್ ಗಜೇಂದರ್ ಸಿಂಗ್ ಶಾಂತಿಕಾಲದ ಉನ್ನತ ಶೌರ್ಯ ಪದಕಕ್ಕೆ ಭಾಜನರಾದ ಮುಂಬೈ ದಾಳಿದ ಕಾಲದ ಇತರ ಹುತಾತ್ಮ ಯೋಧರು.
ಕರ್ಕರೆ, ಸಾಲಸ್ಕರ್ ಮತ್ತು ಓಂಬಳೆ ಅವರ ಪ್ರಶಸ್ತಿಯನ್ನು ಅವರ ಪತ್ನಿಯರು ಸ್ವೀಕರಿಸಿದರೆ, ಮೇಜರ್ ಉನ್ನಿಕೃಷ್ಣನ್‌ಗೆ ನೀಡಲಾದ ಪ್ರಶಸ್ತಿಯನ್ನು ಅವರ ತಾಯಿ ಸ್ವೀಕರಿಸಿದರು.
ಕಳೆದ ವರ್ಷ ರಾಜಧಾನಿ ಸಮೀಪದ ಬಾಟ್ಲಾಹೌಸ್‌ನಲ್ಲಿ ಭಯೋತ್ಪಾದಕರ ಜೊತೆಗಿನ ಕಾಳಗದಲ್ಲಿ ಸಾವನ್ನಪ್ಪಿದ ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಅವರಿಗೂ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಮ್ಮು-ಕಾಶ್ಮೀರದ ಉಗ್ರಗಾಮಿಗಳ ವಿರುದ್ಧ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೃತರಾದ 45 ರಾಷ್ಟ್ರೀಯ ರೈಫಲ್ಸ್‌ನ ಸೇನಾ ಕರ್ನಲ್ ಜೋಜನ್ ಥಾಮಸ್ ಮತ್ತು 10ನೇ ಪ್ಯಾರಾಚ್ಯೂಟ್ ರೆಜಿಮೆಂಟಿನ ವಿಶೇಷ ಪಡೆಗಳ ಕಮಾಂಡೋ ಹವಿಲ್ದಾರ್ ಬಹದ್ದೂರ್ ಸಿಂಗ್ ಬೋಹ್ರಾ ಅವರನ್ನೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪದಕ ಪ್ರದಾನ ಮಾಡಿ ಗೌರವಿಸಿದರು. |