ಪಂಜಾಬಿನ ತರ್ನ್ ತರನ್ ಜಿಲ್ಲೆಯಲ್ಲಿ ನವವಧೂವರರನ್ನು ವಧುವಿನ ಕುಟುಂಬ ಸಾರ್ವಜನಿಕವಾಗಿ ಗುಂಡಿಟ್ಟು ಕೊಂದಿರುವ ಅಮಾನುಷ ಘಟನೆ ನಡೆದಿದೆ. ಹಿರಿಯರ ಮಾತನ್ನು ಧಿಕ್ಕರಿಸಿ ವಿವಾಹವಾಗಿರುವ ಈ ಜೋಡಿಯನ್ನು ಕುಟುಂಬದ ಘನತೆಗೆ ಧಕ್ಕೆಯುಂಟುಮಾಡಿದ್ದಾರೆಂದು ಹುಡುಗಿಯ ಕುಟುಂಬದ ಸದಸ್ಯರು ಗುಂಡಿಟ್ಟು ಕೊಂದಿದ್ದಾರೆ. ಇವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಹೈಕೋರ್ಟ್ ಪೊಲೀಸರಿಗೆ ಆದೇಶ ನೀಡಿರುವ ಕೆಲವೇ ದಿನಗಳಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬಾಲ್ಕರ್ ಸಿಂಗ್(30) ಮತ್ತು ರವೀಂದರ್ ಪಾಲ್ ಕೌರ್(19) 'ಮರ್ಯಾದೆ'ಯ ಕೆಂಗಣ್ಣಿಗೆ ಬಲಿಯಾದವರು. ಈ ಜೋಡಿ ಜನವರಿ ಒಂದರಂದು ಕಾನುನುಬದ್ಧವಾಗಿ ವಿವಾಹವಾಗಿದ್ದರು. ಈ ವಿವಾಹವನ್ನು ಹುಡುಗಿಯ ಹೆತ್ತವರು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ತಮಗೆ ಜೀವಬೆದರಿಕೆ ಇದೆ ಎಂಬುದಾಗಿ ನವವಿವಾಹಿತ ಜೋಡಿಯು ಪಂಜಾಬ್ ಹೈಕೋರ್ಟ್ ಮೊರೆ ಹೋಗಿದ್ದರು.
ಹುಡುಗಿಯ ತಂದೆ ಕಾಬುಲ್ ಸಿಂಗ್, ತನ್ನ ಪುತ್ರ ರಾಜ್ಬೀರ್ಸಿಂಗ್ ಹಾಗೂ ಇತರ ಇಬ್ಬರು ಸಂಬಂಧಿಗಳಾದ ಜತೀಂದರ್ ಸಿಂಗ್ ಮತ್ತು ಸರ್ವೈಲ್ ಸಿಂಗ್ ಎಂಬವರು ಬಾಲ್ಕರ್ ಆಹಾರಧಾನ್ಯ ಖರೀದಿಸುತ್ತಿದ್ದ ವೇಳೆಗೆ ಆತನನ್ನು ಅಟ್ಟಾಡಿಸಿ ಗುಂಡಿಕ್ಕಿ ಕೊಂದರು.
ಬಳಿಕ ಹಂತಕರು ರವೀಂದರ್‌ಳನ್ನು ಕೊಲ್ಲಲು ಆಕೆಯ ಮನೆಗೆ ತೆರಳಿದ್ದರು. ಇವರನ್ನು ಕಂಡ ರವೀಂದರ್ ಹೊಲಕ್ಕೆ ಓಡಿದರೂ ಬೆಂಬಿಡದ ಇವರು ಈಕೆಯನ್ನೂ ಗುಂಡಿಟ್ಟು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆರೋಪಿಗಳ ಪತ್ತೆಗಾಗಿ ದಾಳಿ ನಡೆಸಲಾಗಿದೆ. |