ಮುಂಬೈ ಉಪನಗರ ಅಂಧೇರಿಯ ಹೋಟೇಲೊಂದರ ಮೇಲೆ ಕಳೆದ ವಾರ ದಾಳಿ ನಡೆಸಿದ ತಂಡದ ನೇತೃತ್ವ ವಹಿಸಿರುವ ಆಪಾದನೆ ಮೇರೆಗೆ ಶಿವ ಸೇನಾ ಸಂಸದ ಸಂಜಯ್ ರಾವತ್‌ರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 21 ಮಂದಿಯನ್ನು ಹೋಟೇಲು ಮ್ಯಾನೇಜ್‌ಮೆಂಟ್ ಕೆಲಸದಿಂದ ಕಿತ್ತು ಹಾಕಿರುವುದನ್ನು ಪ್ರತಿಭಟಿಸಿ ಶಿವ ಸೇನೆ ದಾಳಿಗೆ ಮುಂದಾಗಿತ್ತು.
ರಾಜ್ಯ ಸಭಾ ಸದಸ್ಯ ಹಾಗೂ ಶಿವಸೇನಾ ಮುಖವಾಣಿ ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರಾವುತ್‌ರನ್ನು ಅಂಧೇರಿ ದಂಡಾಧಿಕಾರಿಯ ಮುಂದೆ ಹಾಜರು ಪಡಿಸಲಾಗುವುದು.
ಗಲಭೆಯ ಆರೋಪ ಹೊರಿಸಿ ರಾವುತ್ ವಿರುದ್ಧ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಸಹರ್ ಠಾಣೆಯ ಹಿರಿಯ ಪೊಲೀಸ್ ಅಥಿಕಾರಿ ತಿಳಿಸಿದ್ದಾರೆ.
ಹೋಟೇಲ್ ದಾಳಿಗೆ ಸಂಬಂಧಿಸಿದಂತೆ ಸೇನಾ ನೇತೃತ್ವದ ಭಾರತೀ ಕಾಮ್ಗಾರ್ ಸೇನಾದ 53 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಕೇಂದ್ರ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ರಾವುತ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ದುಷ್ಕರ್ಮಿಗಳು ಲಲಿತ್ ಸಮೂಹದ ಹೋಟೇಲಿಗೆ ನುಗ್ಗಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೈದಿದ್ದರು. |