ತೀವ್ರ ಅನಾರೋಗ್ಯದಿಂದ ಕಂಗೆಟ್ಟಿದ್ದ ಮಾಜಿ ರಾಷ್ಟ್ರಪತಿ ಆರ್.ವೆಂಕಟ್ರಾಮನ್ ಅವರು ಮಂಗಳವಾರ ಸಾವನ್ನಪ್ಪಿದ್ದಾರೆ. ಮರಣ ಕಾಲಕ್ಕೆ ಅವರಿಗೆ 98 ವರ್ಷ ವಯಸ್ಸಾಗಿತ್ತು. ಹಲವು ಅಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿಗಳನ್ನು 15 ದಿನಗಳ ಹಿಂದೆ ಇಲ್ಲಿನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೆಂಕಟ್ರಾಮನ್ ಅವರ ಬಗ್ಗೆ ತುರ್ತುನಿಗಾ ವಹಿಸಿ ಶುಶ್ರೂಷೆ ನೀಡಿದ್ದರೂ ದಿನದಿಂದ ದಿನಕ್ಕೆ ಅವರ ಆರೋಗ್ಯಸ್ಥಿತಿ ಕುಸಿಯುತ್ತಲೇ ಹೋಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅವರ ರಕ್ತದೊತ್ತಡವನ್ನು ಸಹಜವಾಗಿಸಲು ಕೃತಕ ಉಸಿರಾಟ, ಹಾಗೂ ನಿರಂತರ ಹೆಮೊಡಯಾಲಿಸಿಸ್ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.
ಅವರು ರಾಷ್ಟ್ರದ ಎಂಟನೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 1987ರ ಜುಲೈ 25ರಿಂದ 1992ರ ಜುಲೈ 25ರ ತನಕ ಅವರು ಭಾರತದ ರಾಷ್ಟ್ರಪತಿಯಾಗಿದ್ದರು. |