ಪಾಕಿಸ್ತಾನದ ಲಾಹೋರಿನಿಂದ, ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ 70 ಕೋಟಿ ರೂಪಾಯಿ ಮೊತ್ತದ ಸುಮಾರು 14 ಕಿಲೋ ಹೆರಾಯಿನ್ ಸಾಗಿಸುತ್ತಿದ್ದ ಇಬ್ಬರನ್ನು ಕಸ್ಟಂ ಅಧಿಕಾರಿಗಳು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಒಬ್ಬಾಕೆ ಇಳಿವಯಸ್ಸಿನ ಮಹಿಳೆ.
ಸೋಮವಾರ ಸಾಯಂಕಾಲ ಪಾಕಿಸ್ತಾನದಿಂದ ಸಂಜೋತಾ ಎಕ್ಸ್‌ಪ್ರೆಸ್ ಬಂದಾಗ, ಅಟ್ಟಾರಿ ರೈಲ್ವೇನಿಲ್ದಾಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸುಂಕಅಧಿಕಾರಿಗಳು ಶಂಕಿತ ಪ್ರಯಾಣಿಕರನ್ನು ಶೋಧಿಸಿದಾಗ ಇವರು ಸಿಕ್ಕಿಬಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್‌ನಗರದ ನಿವಾಸಿ 62ರ ಹರೆಯದ ಮಹಿಳೆ ಸಾದ್ದಿಕಿಕ್ವಾನ್ ಮತ್ತು ಆಕೆಯ ಸಹಪ್ರಯಾಣಿಕ ಉತ್ತರ ಪ್ರದೇಶದ ಬಾಲಂದೇಶ್ವರ್ ನಿವಾಸಿ ಅಖ್ತರ್ ಅಬ್ಬಾಸ್(27) ಎಂಬಿಬ್ಬರು ಎಂಟು ಕಿಲೋ ಹೆರಾಯಿನ್ ಹೊಂದಿದ್ದು ಈ ಇಬ್ಬರು ಬಂಧನಕ್ಕೀಡಾಗಿದ್ದಾರೆ.
ಈ ಇಬ್ಬರು ಭಾರತೀಯ ಪ್ರಜೆಗಳು ಜನವರಿ 19ರಂದು ಪಾಕಿಸ್ತಾನಕ್ಕೆ ತೆರಳಿದ್ದು ಜನವರಿ 26ರಂದು ಹಿಂತಿರುಗಿದ್ದು, ಇವರು ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಸಂಶಯಿಸಲಾಗಿದೆ.
ನವೆಂಬರ್ 26ರ ಮುಂಬೈ ಘಟನೆಯ ಬಳಿಕ ಗುಪ್ತಚರ ಸಂಸ್ಥೆಗಳು ಹೆಚ್ಚು ಜಾಗರೂಕವಾಗಿದ್ದು, ಅಟ್ಟಾರಿ ರೈಲ್ವೇ ನಿಲ್ದಾಣ ಮತ್ತು ಅಟ್ಟಾರಿ ಚೆಕ್‌ಪೋಸ್ಟ್ ಮೂಲಕದ ಭೂ ಸಾಗಾಟದ ಮೇಲೂ ತೀವ್ರ ನಿಗಾ ಇರಿಸಿದ್ದಾರೆ. |