ಮುಂದಿನ ಲೋಕಸಭಾ ಚುನಾವಣೆಯನ್ನು ಮುಂಬರುವ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗುವುದು ಎಂಬುದಾಗಿ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿ ಹೇಳಿದ್ದಾರೆ.
"ನಾವು ಚುನಾವಣಾ ಆಯೋಗದಲ್ಲಿ ಅಂತಿಮ ದಿನಾಂಕದ ಕುರಿತು ಚರ್ಚಿಸಿಲ್ಲ. ಆದರೆ ಮಹಾಚುನಾವಣೆಯು ಏಪ್ರಿಲ್ 8ರಿಂದ ಮೇ 15ರೊಳಗೆ ನಡೆಯಲಿದೆ" ಎಂಬುದಾಗಿ ನುಡಿದರು. ಅವರು ಜಮ್ಮು ಕಾಶ್ಮೀರ ಚುನಾವಣೆಗಳು-2008 ಎಂಬ ವಿಷಯದ ಕುರಿತು ಇಲ್ಲಿನ ಇಂಡಿಯಾಹೌಸ್‍ನಲ್ಲಿ ಮಂಗಳವಾರ ಸಂಜೆ ಉಪನ್ಯಾಸ ನೀಡುತ್ತಿದ್ದರು.
ಜಮ್ಮು ಕಾಶ್ಮೀರದಲ್ಲಿ ಏಳು ಹಂತದ ಚುನಾವಣೆ ನಡೆಸಿರುವ ವೇಳೆ ಎದುರಾಗಿರುವ ಸಮಸ್ಯೆಗಳನ್ನು ವಿವರಿಸಿದ ಅವರು, ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಶೇ.61.5ರಷ್ಟು ಮತದಾರರು ಮತದಾನ ಮಾಡಿದ್ದು ಇದು ಮುಕ್ತ ಮತ್ತು ಪಾರದರ್ಶಕವಾಗಿತ್ತು ಎಂದು ವಿವರಿಸಿದರು.
ಭಾರತೀಯ ಚುನಾವಣಾ ಆಯೋಗ ಅತ್ಯುನ್ನತ ವಿಶ್ವಾಸಾರ್ಹತೆಯನ್ನು ಹೊಂದಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು. 671 ದಶಲಕ್ಷ ಮತದಾರರನ್ನು ಹೊಂದಿರುವ ಭಾರತದಲ್ಲಿ ಮಹಾ ಚುನಾವಣೆಯು, ವಿಶ್ವದಲ್ಲೇ ಬೃಹತ್ ಚುನಾವಣಾ ಪ್ರಕ್ರಿಯೆಯಾಗಿದೆ ಎಂದು ಆಯುಕ್ತರು ಪ್ರಸ್ತಾಪಿಸಿದರು.
ಇಷ್ಟೊಂದು ದೊಡ್ಡಮಟ್ಟದಲ್ಲಿ ಚುನಾವಣಾ ಮತಯಂತ್ರವನ್ನು ಅಳವಡಿಸಿರುವ ರಾಷ್ಟ್ರ ಭಾರತ ಒಂದೇ, ಈ ವ್ಯವಸ್ಥೆಯು ಮತದಾನದ ಗೌಪ್ಯತೆಯೊಂದಿಗೆ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. |