ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪಕ್ಷಕ್ಕೆ ಸೇರಿರುವ ಉತ್ತರ ಪ್ರದೇಶದ ಮಾಜಿಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರಿಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕ್ಲೀನ್ ಚಿಟ್ ನೀಡಿರುವುದು ಅಲ್ಪಸಂಖ್ಯಾತರ ಕೆಂಗಣ್ಣಿಗೀಡಾಗಿದೆ.ಅಲ್ಪಸಂಖ್ಯಾತರ ಚಾಂಪಿಯನ್ ತಾನೆಂದು ಹೇಳಿಕೊಳ್ಳುತ್ತಿದ್ದ ಸಮಾಜವಾದಿ ಪಕ್ಷವು ಬಿಜೆಪಿಯಲ್ಲಿದ್ದ ಕಲ್ಯಾಣ್ ಸಿಂಗ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕೆ ಕಠಿಣ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ ಬಾಬ್ರಿ ಮಸೀದಿ ಧ್ವಂಸ ವಿಚಾರದಲ್ಲಿ ಕಲ್ಯಾಣ್ ಸಿಂಗ್ ತಪ್ಪಿಲ್ಲ ಎಂದು ಮುಲಾಯಂ ಹೇಳಿರುವುದು ಅಲ್ಪಸಂಖ್ಯಾತರಿಗೆ ಇರಿಸುಮುರಿಸುಂಟುಮಾಡಿದೆ.ಪಕ್ಷದೊಳಗೆಯೇ ಹಿರಿಯ ನಾಯಕರು ಯಾದವ್ ನಿರ್ಧಾರದ ಕುರಿತು ಅಸಮಾಧಾನ ಸೂಚಿಸಿದ್ದಾರೆ. ಎಲ್ಲ ಒಳಿತು-ಕೆಡುಕುಗಳ ವೇಳೆ ಮುಲಾಯಂ ಸಿಂಗ್ ಅವರೊಂದಿಗಿರುವ ಅಜಂ ಖಾನ್ ಅವರಿಗೂ ಯಾದವ್ ಕ್ರಮ ಸರಿ ಎನ್ನಿಸಿಲ್ಲ. "ಮಸೀದಿ ಧ್ವಂಸಕ್ಕೆ ಮುಖ್ಯಕಾರಣ ಕಲ್ಯಾಣ್ ಸಿಂಗ್ ಎಂಬುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ. ಇಂತಹ ವ್ಯಕ್ತಿಯನ್ನು ಅಪರಾಧಿ ಅಲ್ಲ ಎಂದಿರುವುದು ನನಗೆ ಆಘಾತ ನೀಡಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.1992 ರಲ್ಲಿ ಮಸೀದಿ ಧ್ವಂಸವಾದಾಗ ಯಾದವ್ ಅವರು ಕಲ್ಯಾಣ ಸಿಂಗ್ ಈ ಘಟನೆಗೆ ಕಾರಣ ಎಂದು ನೇರ ಆರೋಪ ಮಾಡಿದ್ದು, ಕಲ್ಯಾಣ್ ಸಿಂಗ್ ಸರ್ಕಾರವನ್ನು ವಜಾಗೊಳಿಸಲು ಒತ್ತಾಯಿಸಿದ್ದರು. ಕೇಂದ್ರ ಸಚಿವ ಸಲೀಂ ಶೇರ್ವಾನಿ ಮತ್ತು ಸಂಸದ ರೆಹ್ಮಾನ್ ಬರ್ಖ್ ಅವರುಗಳೂ ಯಾದವ್ ನಿರ್ಧಾರವನ್ನು ಖಂಡಿಸಿದ್ದಾರೆ. ಅಂತಯೇ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಶೀದ್ ಅಲ್ವಿ ಅವರೂ ಅಸಮಾಧಾನ ಸೂಚಿಸಿದ್ದು, "ಯಾದವ್ ಅವರೊಂದಿಗೆ ಈಗ ಮೈತ್ರಿ ಸಾಧಿಸಿದ್ದಾರೆಂದ ಮಾತ್ರಕ್ಕೆ ಅವರ ಪಾಪಗಳೆಲ್ಲ ತೊಳೆದು ಹೋದವು ಎಂಬರ್ಥವಲ್ಲ. ಇದನ್ನು ಮರೆಮಾಚಲು ಮುಲಾಯಂ ಸಿಂಗ್ ಯತ್ನಿಸುತ್ತಿರುವುದು ಅತಿದೊಡ್ಡ ಮೋಸ, ಮಸೀದಿ ಧ್ವಂಸದ ಜವಾಬ್ದಾರರಲ್ಲಿ ಇವರೂ ಒಬ್ಬರು ಎಂಬುದು ಇಡಿ ವಿಶ್ವಕ್ಕೇ ಗೊತ್ತು" ಎಂದು ಸಲೀಂ ಶೇರ್ವಾನಿ ಹೇಳಿದ್ದಾರೆ.1992 ರ ಡಿಸೆಂಬರ್ 6ರಂದು ಕರಸೇವಕರು ಬಾಬರಿ ಮಸೀದಿ ಧ್ವಂಸ ಮಾಡಿದ ವೇಳೆ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಕರಸೇವಕರ ವಿರುದ್ಧ ಕ್ರಮ ಕೈಗೊಳ್ಳಲು ಅಲ್ಲಿ ನಿಯೋಜಿತರಾಗಿದ್ದ ಪೊಲೀಸರಿಗೆ ಅನಮತಿ ನೀಡಲು ಕಲ್ಯಾಣ್ ಸಿಂಗ್ ಅನುಮತಿ ನಿರಾಕರಿಸಿದ್ದರು. ಇದಲ್ಲದೆ, ಇಲ್ಲಿರುವ ಮಸೀದಿಯನ್ನು ಧ್ವಂಸ ಮಾಡಿ ರಾಮಮಂದಿರವನ್ನು ನಿರ್ಮಿಸುವಂತೆ ಶ್ರೀರಾಮ ದೇವರು ತನ್ನ ಕನಸಿನಲ್ಲಿ ವಿಜ್ಞಾಪಿಸಿರುವುದಾಗಿ ಹೇಳಿಕೊಂಡಿದ್ದರು. |