ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಪೆಟ್ರೋಲಿಯಂ ದರ ಇಳಿಸಿದೆ. ಪೆಟ್ರೋಲ್ 5 ರೂ, ಡೀಸೆಲ್ 2ರೂ ಮತ್ತು ಅಡುಗೆ ಅನಿಲದಲ್ಲಿ 25ರೂ ಇಳಿಕೆ ಮಾಡಲಾಗಿದೆ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಈ ನಿರ್ಧಾರ ಕೈಗೊಂಡಿದೆ.ಕಳೆದ ಡಿಸೆಂಬರ್ ಆರರಂದು ಪೆಟ್ರೋಲ್ ಬೆಲೆಯಲ್ಲಿ 5 ರೂಪಾಯಿ, ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಇಳಿಸಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿರುವುದರ ಹಿನ್ನೆಯಲ್ಲಿ ಪೆಟ್ರೋಲಿಯಂ ದರ ಇಳಿಸಲಾಗಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವೊರ ತಿಳಿಸಿದ್ದಾರೆ.ಜನತೆಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವುದಕ್ಕೆ ಸರ್ಕಾರದ ಮೊದಲ ಆದ್ಯತೆ ಎಂದಿರುವ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾದರೆ, ದೇಶಿಯವಾಗಿಯೂ ಬೆಲೆ ಇಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದಂತೆ ಇದೀಗ ನಡೆದುಕೊಂಡಿದೆ ಎಂದು ಸಚಿವರು ಹೇಳಿದರು.ಕೃಷಿ ಮತ್ತು ಸಾರಿಗೆ ವಲಯಗಳು ಅತಿ ಹೆಚ್ಚು ಡೀಸೆಲ್ ಬಳಸುತ್ತಿವೆ. ಡೀಸೆಲ್ ಬೆಲೆ ಇಳಿಕೆಯು ಹಣದುಬ್ಬರ ದರದ ಇಳಿಕೆಗೆ ಸಹಾಯ ಮಾಡಲಿದೆ ಮತ್ತು ಸರ್ಕಾರದ ಆರ್ಥಿಕ ಮತ್ತು ವಿತ್ತೀಯ ಪ್ಯಾಕೇಜುಗಳ ಪರಿಣಾಮವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದರು. |