ಮುಂಬರುವ ಲೋಕಸಭಾ ಚುನಾವಣೆಯು ಏಪ್ರಿಲ್ 8ರಿಂದ ಮೇ15ರೊಳಗೆ ನಡೆಯಲಿದೆ ಎಂಬುದಾಗಿ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿ ಅವರು ನೀಡಿರುವ ಹೇಳಿಕೆಯನ್ನು ಚುನಾವಣಾ ಆಯೋಗ ಅಲ್ಲಗಳೆದಿದೆ.
ಲಂಡನ್‌ನಲ್ಲಿ ಖುರೇಶಿ ನೀಡಿರುವ ಹೇಳಿಕೆಯಿಂದ ದೇಶದಲ್ಲಿ ಚುನಾವಣಾ ಸಂಚಲನ ಉಂಟಾದ ತಕ್ಷಣ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ವಕ್ತಾರರು, ಚುನಾವಣೆ ದಿನಾಂಕದ ಕುರಿತ ವರದಿ ಅಧಿಕೃತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಚುನಾವಣಾ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಆಯೋಗ ಈತನಕ ಸಭೆ ಸೇರಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಯಾವ ಸುದ್ದಿಯೂ ಅಧಿಕೃತವಲ್ಲ" ಎಂದು ವಕ್ತಾರರು ಹೇಳಿದ್ದಾರೆ.
"ನಾವು ಚುನಾವಣಾ ಆಯೋಗದಲ್ಲಿ ಅಂತಿಮ ದಿನಾಂಕದ ಕುರಿತು ಚರ್ಚಿಸಿಲ್ಲ. ಆದರೆ ಮಹಾಚುನಾವಣೆಯು ಏಪ್ರಿಲ್ 8ರಿಂದ ಮೇ 15ರೊಳಗೆ ನಡೆಯಲಿದೆ" ಎಂಬುದಾಗಿ ಖುರೇಶಿ ಹೇಳಿದ್ದರು. ಅವರು ಜಮ್ಮು ಕಾಶ್ಮೀರ ಚುನಾವಣೆಗಳು-2008 ಎಂಬ ವಿಷಯದ ಕುರಿತು ಲಂಡನ್‌ನ ಇಂಡಿಯಾಹೌಸ್‍ನಲ್ಲಿ ಮಂಗಳವಾರ ಸಂಜೆ ಉಪನ್ಯಾಸ ನೀಡುತ್ತಿದ್ದರು.
ಈ ಹಿನ್ನೆಲೆಯಲ್ಲಿ ದೇಶದ ಹೊರಗಡೆ ಚುನಾವಣಾ ಆಯುಕ್ತರು ಚುನಾವಣಾ ದಿನಾಂಕವನ್ನು ಪ್ರಸ್ತಾಪಿಸುವ ಔಚಿತ್ಯವೇನು ಎಂಬುದಾಗಿ ಪ್ರಶ್ನೆಗಳು ಉದ್ಭವಿಸಿದ್ದವು. |