ಪಬ್‌ನಲ್ಲಿ ಶ್ರೀರಾಮ ಸೇನೆ ಯುವಕ-ಯುವತಿಯರನ್ನು ಥಳಿಸಿದ ಘಟನೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವಂತೆ, ಇದಕ್ಕೆ ಸಹಮತ ವ್ಯಕ್ತಪಡಿಸುವಂತಹ ಅಭಿಪ್ರಾಯ ರಾಜಸ್ಥಾನ ಮುಖ್ಯಮಂತ್ರಿ ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಅವರಿಂದ ಹೊರಬಿದ್ದಿದೆ. ಗೆಹ್ಲೋಟ್ ಅವರು ಪಬ್ ಮಾಲ್ ಸಂಸ್ಕೃತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ, ಪಬ್‌ಗಳು ಮಶ್ರೂಮ್ ಮತ್ತು ಬೂಝ್ ಶಾಪ್‌ಗಳನ್ನು ಹನ್ನೊಂದು ಗಂಟೆಯ ತನಕ ತೆರೆದಿರಲು ಅನುಮತಿ ನೀಡುವ 'ಉದಾರ'ನೀತಿಯನ್ನು ರದ್ದುಪಡಿಸಲು ನಿರ್ಧರಿಸಿದ್ದಾರೆ.ಇದಲ್ಲದೆ ಸಾರ್ವಜನಿಕವಾಗಿ ಮಮಕಾರ ತೋರುವಂತಹ ಪರಸ್ಪರ ತಬ್ಬಿಕೊಳ್ಳುವ ಮುತ್ತಿಕ್ಕುವ ವಿಚಾರಕ್ಕೂ ನೈತಿಕ ಕತ್ತರಿ ಹಾಕಲು ಗೆಹ್ಲೋಟ್ ಇಚ್ಛಿಸಿದ್ದಾರೆ. ಪ್ರದೇಶ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು "ತೋಳಿಗೆ ತೋಳು ಬಳಸಿ ಯುವಕ ಯುವತಿಯರು ತಿರುಗಾಡುವುದನ್ನು ಕಂಡು ನೋಡುಗನಿಗೆ ಖುಷಿಯಾಗಬಹುದು. ಆದರೆ ಇದು ರಾಜಸ್ಥಾನದ ಸಂಸ್ಕೃತಿ ಅಲ್ಲ" ಎಂದು ಖಾರವಾಗಿ ಹೇಳಿದ್ದಾರೆ.ಪ್ರೇಮಿಗಳ ತೋಬ್ಬಂಧನಕ್ಕೆ ಕತ್ತರಿ ಹಾಕಲು ಮುಖ್ಯಮಂತ್ರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಇನ್ನೂ ನಿಚ್ಚಳವಾಗದಿದ್ದರೂ, ದಾಖಲೆ ಸಂಖ್ಯೆಯ ಪಾಶ್ಚಾತ್ಯ ಪ್ರವಾಸಿಗಳನ್ನು ಆಕರ್ಷಿಸುವ ರಾಜ್ಯದಲ್ಲಿ ನೈತಿಕ ನೀತಿಗಳು ಹೆಚ್ಚಳವಾಗುವ ಸ್ಪಷ್ಟ ಸಾಧ್ಯತೆಗಳು ಕಂಡು ಬರುತ್ತಿವೆ. ಇದುವರೆಗೆ ಶಿವಸೇನಾ ಕಾರ್ಯಕರ್ತರು ಗ್ರೀಟಿಂಗ್ ಕಾರ್ಡ್ ಅಂಗಡಿಗಳು ಮತ್ತು ಪ್ರೇಮಿಗಳ ದಿನದಂದು ಇಂತಹ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದು, ಇದಕ್ಕೀಗ ಗೆಹ್ಲೋಟ್ ಹೇಳಿಕೆಯಿಂದ ಬಲಬಂದಂತಾಗಿದೆ.ಪಬ್ ಮತ್ತು ವೈನ್ ಸಂಸ್ಕೃತಿಯನ್ನು ಹೆಚ್ಚಿಸುವಂತಹ ಬಿಜೆಪಿ ಸರ್ಕಾರದ ಉದಾರ ನೀತಿಯನ್ನು ಮರುಪರಿಶೀಲಿಸಲಾಗುತ್ತದೆ ಮತ್ತು ರದ್ದು ಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಶಾಪಿಂಗ್ ಮಾಲ್‌ಗಳಲ್ಲಿ ಮತ್ತು ಶಾಪಿಂಗ್ ಸೆಂಟರ್‌ಗಳಲ್ಲಿ ಬಿಯರ್ ಬಾರ್‌ಗಳನ್ನು ಸ್ಥಾಪಿಸುವ ಯೋಜನೆ ಹೊಂದಿತ್ತು. ಇದು ಯುವ ಜನತೆಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಅಲ್ಲದೆ, ಸಮಾಜದಲ್ಲಿ ಅಮಲು ಪದಾರ್ಥದ ಸಂಸ್ಕೃತಿಯನ್ನು ಸ್ವೀಕರಿಸಿದಂತೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ಇದೀಗ ಸಾಮಾಜಿಕ ಕಳವಳದ ಹಿನ್ನೆಲೆಯಲ್ಲಿ ಇದನ್ನು ರದ್ದು ಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ಮುಖಕೆಂಪು ಅಶೋಕ್ ಗೆಹ್ಲೋಟ್ ಅವರೂ ಸಂಘಪರಿವಾರಗಳಂತೆ ನೈತಿಕ ನೀತಿಯನ್ನು ಪ್ರತಿಪಾದಿಸಲು ಹೊರಟಿರುವುದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಗೆಹ್ಲೋಟ್ ಹೇಳಿಕೆಗೆ ಕಾಂಗ್ರೆಸ್‌ನ ಯಾವ ಹಿರಿಯ ನಾಯಕರೂ ಪ್ರತಿಕ್ರಿಯಿಸಲು ಇಚ್ಛಿಸಿಲ್ಲ. ಪಬ್ ಮತ್ತು ಮಾಲ್‌ಗಳಲ್ಲಿ ಹುಡುಗ ಹುಡುಗಿಯರು ಕೈಕೈ ಹಿಡಿದು ತಿರುಗುವುದನ್ನು ತಡೆಯಲಾಗುವುದು ಎಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಪಕ್ಷದ ವಕ್ತಾರ ಶಕೀಲ್ ಅಹ್ಮದ್, ಅವರು ಯಾವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ ಎಂದು ತಿಳಿದಿಲ್ಲ. ಮೊದಲಿಗೆ ಅವರು ಎಂತಹ ಸಂದರ್ಭದಲ್ಲಿ ಇದನ್ನು ವ್ಯಕ್ತಪಡಿಸಿದ್ದಾರೆ ಎಂಬುದನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.ಆದರೆ, ಶಾಲಾಕಾಲೇಜುಗಳು ಮತ್ತು ಆಸ್ಪತ್ರೆಗಳ ಸಮೀಪ ಆರಂಭಿಸಲಾಗಿರುವ ದೊಡ್ಡ ಸಂಖ್ಯೆಯ ಇಂತಹ ಅಂಗಡಿಗಳನ್ನು ಮುಚ್ಚಿಸುವುದಾಗಿ ತಾನೂ ಘೋಷಿಸಿರುವುದಾಗಿ ಶಕೀಲ್ ನುಡಿದರು. |