ರಾಷ್ಟ್ರದ ಎಲ್ಲ ಪ್ರಜೆಗಳಿಗೆ ವಿಶೇಷವಾದ ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ಹೊಂದಿರುವ ಗುರುತಿನ ಚೀಟಿಯನ್ನು ನೀಡುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ. ಈ ಪ್ರಕ್ರಿಯೆಗೆ ರಾಷ್ಟ್ರೀಯ ಪ್ರಾಧಿಕಾರವನ್ನು ಸ್ಥಾಪಿಸಲು ಸರ್ಕಾರ ಅಧಿಸೂಚನೆ ನೀಡುವುದರೊಂದಿಗೆ ಈ ಕಾರ್ಯಕ್ಕೆ ಚಾಲನೆ ಲಭಿಸಿದಂತಾಗಿದೆ.
ಈ ಯೋಜನೆಯಡಿ ಪ್ರತಿಯೊಬ್ಬರಿಗೂ ವಿಶೇಷ ಗುರುತಿನ ಸಂಖ್ಯೆ, ಭಾವಚಿತ್ರ ಹಾಗೂ ಬಯೋಮೆಟ್ರಿಕ್ ಡೇಟಾವನ್ನು ಹೊಂದಿರುವಂತಹ ಶಾಶ್ವತ ಗುರುತಿನ ಚೀಟಿ ನೀಡಲು ಸರ್ಕಾರ ಮುಂದಾಗಿದೆ. ಇದನ್ನು ವಯೋಬೇಧವಿಲ್ಲದೆ, ಮಕ್ಕಳೂ ಸೇರಿದಂತೆ ಹುಟ್ಟಿನಿಂದ ಸಾವಿನ ತನಕದ ಪ್ರತಿಯೊಬ್ಬರಿಗೂ ನೀಡಲಾಗುವುದು. ಭದ್ರತಾ ಸಮಸ್ಯೆಯನ್ನು ಪರಿಹರಿಸಲು ಗುರುತಿಗೆ ಸಂಬಂಧಿಸಿದ ವಂಚನೆಗಳನ್ನು ತಡೆಯುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನಾ ಆಯೋಗದಡಿ ಪ್ರತ್ಯೇಕ ಗುರುತಿನೊಂದಿಗೆ ಸ್ಥಾಪಿಸಲ್ಪಡುವ ನ್ಯಾಶನಲ್ ಅಥಾರಿಟಿ ಫಾರ್ ಯೂನಿಕ್ ಐಡೆಂಟಿಟಿ(ಯುಐಡಿ)ಯು ಈ ಗುರುತಿನ ಸಂಖ್ಯೆಯನ್ನು ನೀಡಲಿದೆ. ಈ ಪ್ರಾಧಿಕಾರವು ರಾಜ್ಯಮಟ್ಟದಲ್ಲಿ ಸ್ಥಾಪಿಸಲಾಗುವ ಇಂತಹುದೇ ಮಂಡಳಿಗಳ ಸಹಕಾರದೊಂದಿಗೆ ಕಾರ್ಯಾಚರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೊದಲಿಗೆ ಪ್ರಸಕ್ತ ಮತದಾರರ ಪಟ್ಟಿಯಲ್ಲಿರುವ ವಿವರಗಳ ಆಧಾರದ ಮೇಲೆ ಎಲ್ಲಾ ಮತದಾರರಿಗೆ ಯುಐಡಿ ಸಂಖ್ಯೆ ನೀಡಲಾಗುವುದು. ನಂತರದಲ್ಲಿ 18ರ ವಯೋಮಿತಿಯ ಒಳಗಿನವರನ್ನು ಈ ಪಟ್ಟಿಗೆ ಸೇರಿಸಲಾಗುವುದು.
ಗುರತಿನ ಪಟ್ಟಿ ಪರಿಪೂರ್ಣವಾಗಲು ಭಾವಚಿತ್ರಗಳು ಮತ್ತು ಬಯೋಮೆಟ್ರಿಕ್ ಡೇಟಾಗಳನ್ನು ಸೇರಿಸಲಾಗವುದು. ಅಲ್ಲದೆ, ಸರಳವಾಗಿ ನೋಂದಣಿ ಹಾಗೂ ಮಾಹಿತಿ ಬದಲಾವಣೆ ಪ್ರಕ್ರಿಯೆಯನ್ನು ಜನತೆಯ ಅನುಕೂಲಕ್ಕಾಗಿ ಕಲ್ಪಿಸಲಾಗುವುದು ಎಂದು ಮೂಲಗಳು ಹೇಳಿವೆ.
ಈ ಪ್ರಾಧಿಕಾರದ ಸ್ಥಾಪನನೆಯನ್ನು ತ್ವರಿತಗೊಳಿಸಲು ಯೋಜನಾ ಆಯೋಗದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ತಿಳಿಸಿದ್ದಾರೆ. |