ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಸೇವಾನಿರತ ಸೇನಾಧಿಕಾರಿ ಶ್ರೀಕಾಂತ್ ಪುರೋಹಿತ್ ಹಾಗೂ ಇದೀಗ ಪೊಲೀಸರ ವಶದಲ್ಲಿರುವ ಪ್ರಮೋದ್ ಮುತಾಲಿಕ್ ನಡುವೆ ಸಂಪರ್ಕಗಳಿವೆ ಎಂಬ ಕುರಿತು ಪುರಾವೆಗಳು ಹೊರಬೀಳುತ್ತಿವೆ.
ಉಡುಪಿಯಲ್ಲಿ ಜನವರಿ 17ರಂದು ಹಿಂದು ಜನಜಾಗೃತಿ ಸಮಿತಿಯು ಸಂಘಟಿಸಿದ್ದ ಸಮಾರಂಭ ಒಂದರಲ್ಲಿ ಮಾತನಾಡಿದ್ದ ಮುತಾಲಿಕ್ ಅವರು ಹಿಂದೂ ಸಂಘಟನೆಗಳು ಹೇಗೆ ಕಾರ್ಯಾಚರಿಸಬಲ್ಲವು ಎಂಬುದಕ್ಕೆ ಮಾಲೆಗಾಂವ್ ಸ್ಫೋಟ ಒಂದು ಸಣ್ಣ ಉದಾಹರಣೆ ಎಂದು ಹೇಳಿದ್ದರು.
ಈ ಮಧ್ಯೆ, ತಾನು ಮುತಾಲಿಕ್ ಅವರನ್ನು ಭೇಟಿಯಾಗಿರುವುದಾಗಿ ಮತ್ತು ಅವರು ತನ್ನ ಕಾರ್ಯ ಮತ್ತು ಅರ್ಪಣಾ ಮನೋಭಾವವನ್ನು ಶ್ಲಾಘಿಸಿದ್ದರು ಎಂದು ವಿಚಾರಣೆ ವೇಳೆ ಪುರೋಹಿತ್ ಹೇಳಿದ್ದಾರೆನ್ನಲಾಗಿದೆ.
"ಪುಣೆಯಲ್ಲಿ ತಾನು ಮುತಾಲಿಕ್‌ರನ್ನು ಭೇಟಿಯಾಗಿದ್ದೆ, ಕರ್ನಾಟಕದಲ್ಲೊಂದು ಸಂಘಟನೆ ಇದೆ. ಅವರ ತತ್ವಗಳು ಬೇರೆಯಾಗಿದ್ದರೂ ಉತ್ತಮ ಕಾರ್ಯನಡೆಸುತ್ತಿದ್ದಾರೆ. ಅವರು ಬಿಜೆಪಿ ಮತ್ತು ಸಂಘಪರಿವಾರದೊಂದಿಗೆ ಕಾರ್ಯಾಚರಿಸುತ್ತಿದೆ. ಭಜರಂಗದಳದ ಮುಖ್ಯಸ್ಥರಾಗಿದ್ದ ಅವರನ್ನು ಸೈದ್ಧಾಂತಿಕ ಭಿನ್ನತೆಯ ಹಿನ್ನೆಲೆಯಲ್ಲಿ ಕಿತ್ತೆಸಯಲಾಗಿತ್ತು ಅಥವಾ ಆ ಸಂಘಟನೆಯಿಂದ ಹೊರಬಂದು ಅವರು ಪ್ರತ್ಯೇಕ ಸಂಘಟನೆಯಾದ ಹಿಂದೂ ರಾಷ್ಟ್ರಸೇನೆ ಮತ್ತು ಶ್ರೀರಾಮ ಸೇನೆಯನ್ನು ಹುಟ್ಟು ಹಾಕಿದ್ದರು" ಎಂದು ಪುರೋಹಿತ್ ಹೇಳಿದ್ದಾರೆನ್ನಲಾಗಿದೆ.
ಆದರೆ, ತನಗೂ ಮಾಲೆಗಾಂವ್ ಸ್ಫೋಟಕ್ಕೂ ಯಾವದೇ ಸಂಪರ್ಕವಿಲ್ಲ ಎಂದು ಮುತಾಲಿಕ್ ತಳ್ಳಿಹಾಕಿದ್ದಾರೆ.
ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯಾಗಿರುವ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಇದೀಗ ಮಹಾರಾಷ್ಟ್ರ ಎಟಿಎಸ್ ವಶದಲ್ಲಿದ್ದಾರೆ. |