ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ಇದ್ದ ಹೆಂಡತಿಯನ್ನು ದೂರತಳ್ಳಿ, ಅಪ್ಪನಿಂದ ಬಯ್ಸಿಕೊಂಡು, ಮನೆಯಿಂದ ಹೊರಗೆ ಹಾಕಿಸಿಕೊಂಡು, ಇಸ್ಲಾಂಗೆ ಪರಿವರ್ತನೆಗೊಂಡು ಮದುವೆಯಾದ ಹರ್ಯಾಣದ ಮಾಜಿ ಮುಖ್ಯಮಂತ್ರಿ ಚಂದರ್ ಮೋಹನ್ ಅವರ ಹೊಸ ಪತ್ನಿ ಫಿಜಾ ರಕ್ತದೊತ್ತಡದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಅದೃಷ್ಟವಶಾತ್ ಅವರೀಗ ಅಪಾಯದಿಂದ ಪಾರಾಗಿದ್ದಾರೆ.
ಆಕೆ ಆತ್ಮಹತ್ಯಾ ಪತ್ರವನ್ನು ಬರೆಯಲು ಯತ್ನಿಸಿದ್ದರೂ, ಮೊದಲೇ ಪ್ರಜ್ಞೆತಪ್ಪಿ ಬಿದ್ದರು ಎಂದು ಅವರ ಸಂಬಂಧಿ ಸತ್ಪಾಲ್ ಹೇಳಿದ್ದಾರೆ. ಫಿಜಾ ಅವರು ಸತ್ಪಾಲ್ ನಿವಾಸದಲ್ಲಿ ಆತ್ಮಹತ್ಯೆಗೆ ಪ್ರಯತ್ನಸಿದ್ದರು. ಅವರನ್ನು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.
ಅದಾಗಲೇ ವಿವಾಹಿತರಾಗಿದ್ದ ಚಂದರ್ ಮೋಹನ್ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಅವರು ಬಳಿಕ ಇಸ್ಲಾಮಿಗೆ ಪರಿವರ್ತನೆಗೊಂಡು ಅನುರಾಧ ಬಾಲಿ (ಇದೀಗ ಪಿಜಾ)ಯನ್ನು ವಿವಾಹವಾಗಿರುವುದಾಗಿ ಘೋಷಿಸಿಕೊಂಡು ಪ್ರತ್ಯಕ್ಷರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ತನ್ನ ಉಪಮುಖ್ಯಮಂತ್ರಿ ಸ್ಥಾನ ಕಳಕೊಂಡಿದ್ದರು. ಮತ್ತು ಅವರ ತಂದೆ ಹಿರಿಯ ರಾಜಕಾರಣಿ ಭಜನ್‌ಲಾಲ್ ಅವರ ತೀವ್ರ ಅಸಮಾಧಾನಕ್ಕೆ ಈಡಾಗಿದ್ದರು.
ತನ್ನ ಪತಿಯನ್ನು ಅವರ ವೈರಿಗಳು ಅಪಹರಿಸಿದ್ದಾರೆ ಎಂದು ಫಿಜಾ ಬುಧವಾರ ಅಲವತ್ತುಕೊಂಡಿದ್ದರು. ಆದರೆ ಬಳಿಕ ತಾನು ಅಪರಹಣಕ್ಕೀಡಾಗಿಲ್ಲ ಎಂದು ಚಂದರ್ ಮೋಹನ್ ಹೇಳಿಕೆ ನೀಡಿದ್ದರು.
ಚಂದರ್ ಹಾಗೂ ಅವರ ಕುಟುಂಬದ ನಡುವೆ ಜಗಳ ಉಂಟಾಗಿತ್ತು ಎಂದು ಹೇಳಲಾಗಿದೆ. ಬಳಿಕ ಚಂದರ್ ಅವರು ದೆಹಲಿಯ ಗ್ರೇಟರ್ ಕೈಲಾಸ್‌ನಲ್ಲಿ ಪತ್ತೆಯಾಗಿದ್ದರು. ಈ ಮಧ್ಯೆ, ಅಪಹರಣಕ್ಕೀಡಾಗಲು ತಾನು ಚಿಕ್ಕಮಗುವಲ್ಲ ಎಂದು ಚಂದರ್ ಮೋಹನ್ ಹೇಳಿದ್ದಾರೆ.
"ಈ ಕ್ರೈಂ ಹಿಂದೆ ಅವರ ಸಹೋದರ ಬಿಶ್ನೋಯಿ ಇದ್ದಾರೆ. ಬಿಶ್ನೋಯಿ ಕಳುಹಿಸಿದ ವ್ಯಕ್ತಿಗಳು ತನ್ನ ಪತಿಯನ್ನು ಅಪಹರಿಸಿ ಅವರನ್ನು ಕೆಟ್ಟದಾಗಿ ಬಡಿದರು" ಎಂಬುದಾಗಿ ಫಿಜಾ ಹೇಳಿದ್ದಾರೆ. ಆದರೆ ಫಿಜಾ ಆರೋಪವನ್ನು ಬಿಶ್ನೋಯಿ ಅಲ್ಲಗಳೆದಿದ್ದಾರೆ. "ಆತನಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆತನೊಂದಿಗಿನ ಎಲ್ಲಾ ಸಂಬಂಧಗಳನ್ನು ಈಗಾಗಲೇ ಕಡಿದುಕೊಳ್ಳಲಾಗಿದೆ. ಆತ ಕಾಣೆಯಾಗಿದ್ದರೆ ಪತ್ತೆಮಾಡುವುದು ರಾಜ್ಯ ಸರ್ಕಾರದ ಕೆಲಸ" ಎಂದು ಹರ್ಯಾಣ ಜನಹಿತ ಕಾಂಗ್ರೆಸ್ ನಾಯಕರಾದ ಬಿಶ್ನೋಯಿ ಅವರು ಅಂಬಾಲದಲ್ಲಿ ಪ್ರತಿಕ್ರಿಯಿಸಿದ್ದಾರೆ. |