ಪ್ರಾದೇಶಿಕ ಮಿತ್ರ ಪಕ್ಷಗಳು ಹಲವಾರು ರಾಜ್ಯಗಳಲ್ಲಿ ಹೆಚ್ಚಿನ ಸೀಟುಗಳಿಗಾಗಿ ಬೇಡಿಕೆ ಇಟ್ಟಿರುವ ನಡುವೆಯೇ, ಮುಂಬುರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯಮಟ್ಟದಲ್ಲಿ ಹೊಂದಾಣಿಕೆಯನ್ನು ಸೀಮಿತಗೊಳಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಮೈತ್ರಿಯನ್ನು ತಳ್ಳಿಹಾಕಿದೆ.
"ರಾಷ್ಟ್ರಮಟ್ಟದಲ್ಲಿ ಮೈತ್ರಿ ಇಲ್ಲ. ರಾಜ್ಯಮಟ್ಟದಲ್ಲಿ ನಮಗೆ ಮಿತ್ರ ಪಕ್ಷಗಳಿವೆ ಮತ್ತು ಸೀಟು ಹೊಂದಾಣಿಕೆ ಮಾಡುತ್ತೇವೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರು ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಎನ್‌ಸಿಪಿ, ಪಾಸ್ವಾನ್ ನೇತೃತ್ವದ ಎಲ್‌ಜೆಎಸ್ಪಿ ಮತ್ತು ಎಸ್ಪಿ ಪಕ್ಷಗಳು ಸ್ಥಾನಕ್ಕಾಗಿ ಒತ್ತಾಯಿಸುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ನಿಲುವು ಪ್ರಾಮುಖ್ಯತೆ ಪಡೆದುಕೊಂಡಿದೆ.
"ಮೂಲತಃ ಮೈತ್ರಿಯು ಒಂದು ಸಂಖ್ಯಾ ಆಟ. ಇದು ಯಾರು ಎಷ್ಟು ಸ್ಥಾನ ಪಡೆಯುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಇದು ಚುನಾವಣೆಯ ಬಳಿಕ ಸ್ಪಷ್ಟಗೊಳ್ಳಲಿದೆ. ಒಂದೊಮ್ಮೆ ಕಾಂಗ್ರೆಸ್ ನಿಚ್ಚಳ ಬಹುಮತ ಲಭಿಸಿದ್ದೇ ಅದಲ್ಲಿ ಪರಿಸ್ಥಿತಿ ವಿಭಿನ್ನವಾಗಲಿದೆ" ಎಂದು ಅವರು ಹೇಳಿದ್ದಾರೆ.
ಯುಪಿಎಯ ಸಂಘಟನೆ ಒಡೆಯುತ್ತದೆಯೆ ಎಂಬ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಿದ ಅವರು, "ಯುಪಿಎ ಇರುತ್ತದೆ. ಆದರೆ ಅದು ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ. ಯುಪಿಎಯಲ್ಲಿ ಇರುವ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಫರ್ಧಿಸುತ್ತವೆ ಅಷ್ಟೆ" ಎಂದು ಹೇಳಿದರು.
ಸೀಟು ಹಂಚಿಕೆಯು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ರಾಜ್ಯದ ಕಾಂಗ್ರೆಸ್ ನಾಯಕತ್ವವು ಸ್ಥಳೀಯ ಪರಿಸ್ಥಿತಿ ಮತ್ತು ರಾಜ್ಯ ಮಟ್ಟದ ಪಕ್ಷಗಳ ಆಧಾರದಲ್ಲಿ ಎಐಸಿಸಿ ಬೆಂಬಲದೊಂದಿಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಪಕ್ಷವು ಮೈತ್ರಿ ಮಾಡಿಕೊಂಡಿರದ ಕಡೆಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಮತಯಾಚಿಸಲಿದೆ. ಮೈತ್ರಿ ಮಾಡಿಕೊಂಡಿರುವ ಸ್ಥಳಗಳಲ್ಲಿ ಪಕ್ಷವು ತನ್ನ ಮಿತ್ರ ಪಕ್ಷಗಳ ಪರವಾಗಿಯೂ ಮತಯಾಚಿಸಲಿದೆ ಎಂದು ದ್ವಿವೇದಿ ನುಡಿದರು. |