ಮಂಗಳೂರು ಪಬ್ ದಾಳಿಯ ಬಿಸಿ ಅನುಭವಿಸುತ್ತಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮಾಲೆಗಾಂವ್ ಸ್ಫೋಟ ಒಂದು ಟ್ರಯಲ್ ಎಂದಿದ್ದು ಉಗ್ರವಾದವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಜ್ಞಾ ಹೆಸರು ಬಹಿರಂಗಗೊಳ್ಳುತ್ತಿರುವಂತೆ, ಅವರನ್ನು ಕ್ರಾಂತಿಕಾರಿ ಎಂದು ಕರೆದ ಮುತಾಲಿಕ್, ಈಕೆ ಇತರರಿಗೆ ಆದರ್ಶ ಎಂದು ಬಣ್ಣಿಸಿದ್ದರು.
"ಸಾಧ್ವಿಗೆ ಯಾರೂ ಉಗ್ರವಾದಿ ಎಂಬ ಹಣೆಪಟ್ಟಿ ನೀಡಬಾರದು, ಒಂದೊಮ್ಮೆ ಯಾರಾದರೂ ಹಾಗೆ ಮಾಡಿದರೆ, ಅದರಿಂದ ಈ ರಾಷ್ಟ್ರದಲ್ಲಿ ಕ್ರಾಂತಿಯ ಸಂದೇಶ ನಾಶವಾಗುತ್ತದೆ. ಭಯೋತ್ಪಾದನೆಯು ದೇಶದ್ರೋಹಿಗಳ ಕೃತ್ಯ. ಸಾಧ್ವಿ ಒಬ್ಬ ಕ್ರಾಂತಿಕಾರಿಣಿ ಮತ್ತು ನಮಗೆಲ್ಲ ಆದರ್ಶ. ಆಕೆಯನ್ನು ಉಗ್ರವಾದಿ ಎಂದು ಕರೆಯುವುದಾದರೆ, ಕ್ರಾಂತಿಕಾರಿಣಿಯರಾದ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಮತ್ತು ಭಗತ್ ಸಿಂಗ್ ಅವರೂ ಸಹ ಭಯೋತ್ಪಾದಕರು" ಎಂದು ಮುತಾಲಿಕ್ ಸಭೆಯೊಂದರಲ್ಲಿ ಹೇಳಿದ್ದಾರೆ.
ಜನವರಿ 17ರಂದು ಉಡುಪಿಯಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಇದು ಸ್ಫೋಟಗಳ ಸಮಯ, ಮಾಲೆಗಾಂವ್ ಒಂದು ಟ್ರಯಲ್ ಮಾತ್ರ. ಪ್ರತಿಮನೆಯಲ್ಲೂ ಪ್ರಜ್ಞಾರಂತಹ ವ್ಯಕ್ತಿಗಳಿರಬೇಕು ಎಂದು ಹೇಳಿದ್ದರು. |