ಕಲ್ಯಾಣಸಿಂಗ್ ಅವರೊಂದಿಗಿನ ಹೊಸ ಸಂಬಂಧವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಸಮಾಜವಾದಿ ಪಕ್ಷ(ಎಸ್ಪಿ)ದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್, ಬಾಬರಿ ಮಸೀದಿ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದರೆ, ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರಿಗೂ ನಮ್ಮ ಪಕ್ಷಕ್ಕೆ ಸ್ವಾಗತವಿದೆ ಎಂದು ಹೇಳಿದ್ದಾರೆ. ಕೆಲವೇ ಕ್ಷಣಗಳಲ್ಲಿ ವೇದಿಕೆ ಕುಸಿದು ಬಿದ್ದ ಘಟನೆಯೂ ನಡೆಯಿತು." ಬಾಬರಿ ಮಸೀದಿ ಧ್ವಂಸ ಕುರಿತು ವಿಶಾದ ವ್ಯಕ್ತಪಡಿಸಿದ್ದೇ ಆದರೆ, ನಾವು ಆಡ್ವಾಣಿಯವರನ್ನೂ ಪಕ್ಷಕ್ಕೆ ಆಹ್ವಾನಿಸುತ್ತೇವೆ" ಎಂದು ಅಮರ್ ಸಿಂಗ್ ಇಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ನುಡಿದರು. ಪಕ್ಷದ ಸ್ಥಳೀಯ ಅಭ್ಯರ್ಥಿಯಾಗಿರುವ ಖ್ಯಾತ ಭೋಜ್‌ಪುರಿ ಗಾಯಕ ಮನೋಜ್ ತಿವಾರಿ ಪರ ಚುನಾವಣಾ ಪ್ರಚಾರ ಆರಂಭಿಸಿ ಅವರು ಮಾತನಾಡುತ್ತಿದ್ದರು.1992 ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ್ದ ವೇಳೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಇತ್ತೀಚೆಗೆ ಬಿಜೆಪಿ ಮೇಲೆ ಕೋಪಿಸಿಕೊಂಡು ಸಮಾಜವಾದಿ ಪಕ್ಷ ಸೇರಿದ್ದಾರೆ. ಕಲ್ಯಾಣ್ ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಮತ್ತು ಅವರ ಪುತ್ರ ರಾಜ್ವೀರ್ ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದರಿಂದ ಪಕ್ಷಕ್ಕೆ ಬಲ ನೀಡುತ್ತದೆ ಮತ್ತು ಇದರಿಂದಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆಯುಂಟಾಗುತ್ತದೆ ಎಂದು ಸಿಂಗ್ ಸಮರ್ಥಿಸಿಕೊಂಡಿದ್ದಾರೆ.ಕಲ್ಯಾಣ್ ಸಿಂಗ್ ಅವರ ಸೇರ್ಪಡೆಗೆ ಪಕ್ಷದೊಳಗಿನ ಮುಸ್ಲಿಂ ನಾಯಕರು ವ್ಯಕ್ತಪಡಿಸಿರುವ ವಿರೋಧಗಳಿಗೆ ಪ್ರತಿಕ್ರಿಸಿರುವ ಸಿಂಗ್, "ಕಲ್ಯಾಣ್ ಸಿಂಗ್ ಪುತ್ರ 2005ರಲ್ಲಿ ಮುಲಾಯಂ ಸಿಂಗ್ ಸರ್ಕಾರದಲ್ಲಿ ಸಂಪುಟ ಸಚಿವರಾಗಿದ್ದಾಗ ಇವರೆಲ್ಲ ಎಲ್ಲಿ ಹೋಗಿದ್ದರು" ಎಂದು ಪ್ರಶ್ನಿಸಿದರು.ಅಲ್ಲದೆ, ಕಲ್ಯಾಣ್ ಸಿಂಗ್ ಯಾರ ಬಳಿಯೂ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.ಕುಸಿದ ವೇದಿಕೆ ಈ ವೇಳೆ ಸಾರ್ವಜನಿಕ ಸಮಾವೇಶಕ್ಕಾಗಿ ಹಾಕಲಾಗಿದ್ದ ವೇದಿಕೆ ಕುಸಿದು ಬಿತ್ತು. ಅದೃಷ್ಟವಶಾತ್ ಯಾರಿಗೂ ಏನೂ ಹಾನಿಯಾಗಲಿಲ್ಲ. |