ಮುಂಬೈ: ಖ್ಯಾತಗಾಯಕ ಅದ್ನಾನ್ ಸಾಮಿ ವಿರುದ್ಧ ಅವರ ಪತ್ನಿ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯದ ದೂರು ದಾಖಲಿಸಿದ್ದಾರೆ.
ಮುಂಬೈಯಲ್ಲಿರುವ ನಿವಾಸದಲ್ಲಿ ಸಾಮಿ ತನ್ನ ಮೇಲೆ ದೌರ್ಜನ್ಯ ಎಸಗಿ ಶೋಷಣೆ ನಡೆಸುತ್ತಿದ್ದಾರೆ ಎಂದು ಅವರ ಪತ್ನಿ ಸಬಹ ಗಲಾದರಿ ದೂರಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ ಪೊಲೀಸರನ್ನು ಸಂಪರ್ಕಿಸಿದ ಗಲಾದರಿ ಅವರು, ತನ್ನ ಪತಿ ತನ್ನನ್ನು ಶೋಷಿಸಿ ದೌರ್ಜನ್ಯ ಎಸಗುತ್ತಿರುವುದಾಗಿ ದೂರಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯವನ್ನು ಸಂಪರ್ಕಿಸುವಂತೆ ಆಕೆಗೆ ಸಲಹೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಕಿರಣ್ ಸೊನೋನ್ ತಿಳಿಸಿದ್ದಾರೆ.
ಅಲ್ಲದೆ ಪತ್ನಿಯ ವಿರುದ್ಧ ಇಂತಹ ದುರ್ನಡತೆ ತೋರದಂತೆ ಗಾಯಕ ಸಾಮಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ನಗರದ ಹೊರವಲಯದಲ್ಲಿರುವ ಅಂಧೇರಿಯ ಒಶಿವಾರ ಪೊಲೀಸ್ ಠಾಣೆಯಲ್ಲಿ ಈ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. |