ಪಬ್ ಸಂಸ್ಕೃತಿ ವಿರೋಧಿಸುತ್ತಿರುವ ಬಿಜೆಪಿ ಪರಿವಾರಕ್ಕೆ ರಾಜಸ್ಥಾನದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲಾಟ್ ಬಳಿಕ ಮತ್ತೊಬ್ಬ ಬಿಜೆಪಿಯೇತರ ಮುಖಂಡರ, ಅದರಲ್ಲೂ ಕೇಂದ್ರ ಸಚಿವರ ಬೆಂಬಲ ದೊರೆತಿದೆ. ಮಂಗಳೂರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್, ಪಬ್ ಸಂಸ್ಕೃತಿಯು ಭಾರತೀಯ ಜೀವನಮೌಲ್ಯಕ್ಕೆ ವಿರುದ್ಧವಾದುದು ಎಂದಿದ್ದಾರಲ್ಲದೆ, ಪ್ರಸ್ತಾಪಿತ ರಾಷ್ಟ್ರೀಯ ಮದ್ಯ ನೀತಿಯು ಇದರ ನಿಯಂತ್ರಣಕ್ಕೆ ಪೂರಕವಾಗಲಿದೆ ಎಂಬ ತಮ್ಮ ಇಂಗಿತವನ್ನೂ ಸೇರಿಸಿದ್ದಾರೆ.
ಮಹಿಳೆಯರ ಮೇಲೆ ದಾಳಿ ನಡೆದ ಈ ಪ್ರಕರಣವನ್ನು ನಾವು ಖಂಡಿತವಾಗಿಯೂ ಖಂಡಿಸುತ್ತೇವೆ. ಆದರೆ ಪಬ್ ಸಂಸ್ಕೃತಿ ನಿಲ್ಲಬೇಕು. ಇದರಿಂದಾಗಿಯೇ ದೇಶದ ಯುವ ಜನಾಂಗ ಹೆಚ್ಚು ಹೆಚ್ಚಾಗಿ ಕುಡಿತದ ದಾಸರಾಗುತ್ತಿದ್ದಾರೆ ಎಂದು ರಾಮದಾಸ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯುವಜನತೆ ಪಬ್‌ಗೆ ಸಂದರ್ಶಿಸುತ್ತಿರುವುದಕ್ಕೂ ಕುಡಿದು ಚಲಾಯಿಸಿ ಆಗುವ ಅಪಘಾತಗಳ ಹೆಚ್ಚಳಕ್ಕೂ ಸಂಬಂಧ ಕಲ್ಪಿಸುತ್ತಾ ಅವರು, 'ಭಾರತದಲ್ಲಿ ಶೇ.40ರಷ್ಟು ರಸ್ತೆ ಅಪಘಾತಗಳೂ ಆಲ್ಕೋಹಾಲ್‌ಗೆ ಸಂಬಂಧಿಸಿದವು' ಎಂದು ತಿಳಿಸಿದ್ದಾರೆ.
'ಇದು ನಮ್ಮ ಸಂಸ್ಕೃತಿಯಲ್ಲ. ಇದೇ ರೀತಿ ಇದು ಮುಂದುವರಿದಲ್ಲಿ, ಭಾರತವು ಪ್ರಗತಿ ಸಾಧಿಸುವ ಲಕ್ಷಣ ಕಾಣಿಸದು' ಎಂದು ಹೇಳಿದ ರಾಮದಾಸ್, ಕಳೆದ ಐದಾರು ವರ್ಷಗಳಲ್ಲಿ ಯುವಕರ ಮದ್ಯ ಸೇವನೆಯ ಪ್ರಮಾಣ ಶೇ.60ರಷ್ಟು ಹೆಚ್ಚಾಗಿದೆಯೆಂಬ ಸಮೀಕ್ಷೆಯೊಂದರ ವರದಿಯನ್ನು ಉಲ್ಲೇಖಿಸಿದರು.
ಹಾಗಿದ್ದರೆ ಪ್ರಸ್ತಾಪಿತ ರಾಷ್ಟ್ರೀಯ ಮದ್ಯ ಸೇವನೆ ನೀತಿಯು ಪಬ್ ಸಂಸ್ಕೃತಿಯನ್ನು ನಿಲ್ಲಿಸಬಹುದೇ ಎಂದು ಕೇಳಿದಾಗ, ನಾವು ಪಬ್‌ಗಳಿಗೆ ತೆರಳುವ ಯುವಜನರನ್ನು ಕೇಂದ್ರೀಕರಿಸಿಯೇ ಈ ಕಾನೂನು ರೂಪಿಸುತ್ತಿದ್ದೇವೆ ಎಂದರು. |