ನವದೆಹಲಿ: ನಮ್ಮ ನೆಲದಲ್ಲಿ ಮುಂಬೈದಾಳಿಯ ಯೋಜನೆ ಸಿದ್ಧವಾಗಿಲ್ಲ ಎಂಬುದಾಗಿ ಹೇಳಲು ಪಾಕಿಸ್ತಾನ ಯೋಜಿಸುತ್ತಿದೆ ಎಂಬುದಾಗಿ ಸುದ್ದಿಗಳು ಹೊರಬೀಳುತ್ತಲೇ, ಇದನ್ನು ನಿರಾಕರಿಸಲು ಭಾರತವು ಸಿದ್ಧವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನೆರೆಹೊರೆ ದೇಶಗಳ ನಡುವೆ ಸದ್ಯದ ಮಟ್ಟಿಗೆ ತಣ್ಣಗಾಗಿದ್ದ ಉದ್ವಿಗ್ನತೆ ಮತ್ತೆ ತಲೆದೋರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇಂತಹ ಉತ್ತರವನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ ಎಂದು ಮೂಲಗಳು ಶುಕ್ರವಾರ ಹೇಳಿವೆ. 26/11ರ ದಾಳಿಯನ್ನು ಪಾಕ್ ನೆಲದಿಂದ ಜಿಹಾದಿಗಳು ರೂಪಿಸಿದ್ದಾರೆ ಎಂಬುದನ್ನು ಪಾಕಿಸ್ತಾನ ಒಪ್ಪಿಕೊಳ್ಳದಿರಲು ತಯ್ಯಾರಿ ನಡೆಸುತ್ತಿದೆ ಎನ್ನಲಾಗಿದೆ.
ಬ್ರಿಟನ್ನಿಗೆ ಪಾಕಿಸ್ತಾನದ ರಾಯಭಾರಿ ವಾಹಿದ್ ಶಂಸುಲ್ ಹಸನ್ ಅವರು ಮುಂಬೈದಾಳಿಯನ್ನು ಪಾಕಿಸ್ತಾನ ಇಲ್ಲವೇ ಬ್ರಿಟನ್‌ನಲ್ಲಿ ಯೋಜಿಸಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಭಾರತವೂ ಸಹ ಪಾಕಿಸ್ತಾನದ ನಿರಾಕರಣೆಯನ್ನು ನಿರಾಕರಿಸಲು ಸಿದ್ಧವಾಗುತ್ತಿದೆ.
"ನಮಗೆ ತಿಳಿದಂತೆ ಮತ್ತು ನಾವು ತನಿಖೆ ನಡೆಸಿದಂತೆ ಮುಂಬೈದಾಳಿಗೆ ಪಾಕಿಸ್ತಾನದ ನೆಲವನ್ನು ಬಳಸಲಾಗಿಲ್ಲ. ಇದು ಬೇರೆಲ್ಲಿಯಾದರೂ ನಡೆದಿರಬಹುದು. ಆದರೆ ಇದನ್ನು ಪಾಕಿಸ್ತಾನದಲ್ಲಿಯೂ ರೂಪಿಸಿಲ್ಲ" ಎಂದು ಹಸನ್ ಹೇಳಿದ್ದಾರೆ. |