ನವದೆಹಲಿ: ಚುನಾವಣಾ ಆಯೋಗದೊಳಗಿನ ಕಾದಾಟವು ತಾರಕಕ್ಕೇರಿದ್ದು, ಚುನಾವಣಾ ಆಯುಕ್ತ ನವೀನ್ ಚಾವ್ಲಾರನ್ನು ಆಯೋಗದಿಂದ ತೆಗೆದು ಹಾಕಬೇಕು ಎಂಬುದಾಗಿ ಮುಖ್ಯ ಚುನವಣಾ ಆಯುಕ್ತ ಎನ್.ಗೋಪಾಲಸ್ವಾಮಿ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ರಾಷ್ಟ್ರಪತಿಗಳು ಈ ಸಂಬಂಧ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಚಾವ್ಲಾ ಅವರು ರಾಜಕೀಯ ಪಕ್ಷ ಒಂದರ ಪರವಾಗಿದ್ದಾರೆ ಎಂಬುದಾಗಿ ಬಿಜೆಪಿಯು ಸಲ್ಲಿಸಿರುವ ದೂರಿನ ಆಧಾರದಲ್ಲಿ ಗೋಪಾಲ ಸ್ವಾಮಿ ಈ ಶಿಫಾರಸ್ಸು ಮಾಡಿದ್ದಾರೆ. "ಚಾವ್ಲಾ ಅವರು ಕಾಂಗ್ರೆಸ್‌ಗೆ ನಿಕಟವಾಗಿದ್ದಾರೆ ಎಂದು ಬಿಜೆಪಿಗೆ ದೂರಿದ್ದು, ವರದಿ ಸಲ್ಲಿಸಲಾಗಿದೆ. ತಾನು ತನ್ನ ಕರ್ತವ್ಯ ನಿಭಾಯಿಸಿದ್ದೇನೆ" ಎಂದು ಹೇಳಿರುವ ಗೋಪಾಲಸ್ವಾಮಿ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದ್ದಾರೆ.
ಮಹಾ ಚುನಾವಣೆ ಸಮೀಪಿಸುತ್ತಿರುವಂತೆ ಮುಖ್ಯಚುನಾವಣಾ ಆಯುಕ್ತರು ಮಾಡಿರುವ ಶಿಫಾರಸ್ಸಿನಿಂದಾಗಿ ತ್ರಿಸದಸ್ಯ ಆಯೋಗದೊಳಗಿನ ಭಿನ್ನಮತ ಬಹಿರಂಗಗೊಂಡಿದೆ. ಈ ಆಯುಕ್ತರೊಳಗೆ ಈ ಹಿಂದೆಯೂ ಪ್ರಮುಖ ನಿರ್ಧಾರಗಳಿಗೆ ಸಂಬಂಧಿಸಿದಂತೆ ಭಿನ್ನಮತ ತಲೆದೋರಿತ್ತು.
ಕಳೆದ ವರ್ಷ ಕರ್ನಾಟಕದಲ್ಲಿ ಮೇತಿಂಗಳಲ್ಲಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿದ್ದರಾದರೂ ಇದನ್ನು ತಳ್ಳಿಹಾಕಿ ಚುನಾವಣೆ ನಡೆಸಲಾಗಿತ್ತು. ಅದಲ್ಲದೆ 2007ರಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆಯೂ ಇವರು ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ.
ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಚುನಾವಣಾ ಆಯುಕ್ತರೊಬ್ಬರನ್ನು ತೆಗೆದು ಹಾಕಲು ಮುಖ್ಯಚುನಾವಣಾ ಆಯುಕ್ತರ ಶಿಫಾರಸ್ಸು ಅವಶ್ಯಕವಾಗಿದೆ. ಚಾವ್ಲಾರನ್ನು ತೆಗೆದು ಹಾಕಲು ಸರ್ಕಾರ 'ಸು ಮೋಟೋ' (ಏಕಪಕ್ಷೀಯ) ಶಿಫಾರಸ್ಸು ಕೈಗೊಳ್ಳಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. |