ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಹಾಸ್ಯಚಟಾಕಿ ಹಾರಿಸಿರುವ ಜನಪ್ರಿಯ ಹಾಸ್ಯಕಲಾವಿದ ರಾಜು ಶ್ರೀವಾತ್ಸವ ಅವರಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿವೆ ಎಂಬುದಾಗಿ ಅವರ ವ್ಯವಸ್ಥಾಪಕ ಶುಕ್ರವಾರ ಹೇಳಿದ್ದಾರೆ. ಇದಕ್ಕಾಗಿ ಅವರಿಗೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚುಗೊಳಿಸಲಾಗಿದೆ.
ಸುಮಾರು ಒಂದು ತಿಂಗಳಿಂದೀಚೆಗೆ ರಾಜು ಅವರು ಹಲವಾರು ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ. ಕರೆ ನೀಡಿರುವ ಅನಾಮಧೇಯರು ರಾಜುಗೆ ಬೆದರಿಕೆ ಹಾಕಿದ್ದು, ರಾಜು ತನ್ನ ಟಿವಿ ಶೋಗಳಲ್ಲಿ ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಡುವುದು ಮತ್ತು ದಾವೂದ್ ಇಬ್ರಾಹಿಂ ಕುರಿತು ಹಾಸ್ಯಚಟಾಕಿಗಳನ್ನು ಹಾರಿಸುವುದನ್ನು ನಿಲ್ಲಿಸಲಿದ್ದರೆ ಪರಿಸ್ಥಿತಿ ನೆಟ್ಟಗಿರಲಾರದು ಎಂಬ ಧಮ್ಕಿ ಹಾಕಿದ್ದಾರೆ ಎಂಬುದಾಗಿ ರಾಜು ಅವರು ವ್ಯವಹಾರ ವ್ಯವಸ್ಥಾಪಕ ರಾಜೇಶ್ ಶರ್ಮಾ ತಿಳಿಸಿದ್ದಾರೆ.
ಇಲ್ಲಿನ ಒಶಿವಾರದಲ್ಲಿ ನೆಲೆಸಿರುವ ರಾಜು ಹಾಗೂ ಅವರ ಕುಟುಂಬ ಇದನ್ನು ಮೊದಲಿಗೆ ಕ್ರಾಂಕ್ ಕಾಲ್‌ಳೆಂದು ನಿರ್ಲಕ್ಷ್ಯಿಸಿದ್ದರು. ಆದರೆ ಕಳೆದೊಂದು ತಿಂಗಳಿಂದೀಚೆಗೆ ರಾಜು ಸುಮಾರು ಇಂತಹ 10ಕ್ಕಿಂತಲೂ ಹೆಚ್ಚುಕರೆಗಳನ್ನು ಸ್ವೀಕರಿಸಿದ್ದಾರೆ.
ಇಂತಹ ಕರೆಗಳನ್ನು ಟ್ರಾಪ್ ಮಾಡಿರುವ ಕ್ರೈಂಬ್ರಾಂಚ್ ರಾಜು ಅವರಿಗೆ ಹೆಚ್ಚಿನ ಭದ್ರತೆ ಒದಗಿಸಿದೆ. ಕೆಲವು ತಿಂಗಳ ಹಿಂದೆ ರಾಜು ಅವರಿಗೆ ಕೆಲವು ಸ್ಥಳೀಯ ಬೆದರಿಕೆ ಕರೆಗಳು ಬರುತ್ತಿದ್ದು, ಅವರಿಗೆ ಅಲ್ಪಾವಧಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು ಎಂದು ಶರ್ಮಾ ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ರಾಜು ಅವರು 'ಸ್ಟಾರ್ ಒನ್ಸ್ ಲಾಫ್ಟರ್ ಚಾಲೆಂಜ್' ಗೆದ್ದಬಳಿಕ ರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಅವರೀಗ ಹಲವಾರು ಹಲವಾರು ಟಿವಿ ಹಾಸ್ಯ ಪ್ರದರ್ಶನ ನೀಡುತ್ತಿದ್ದಾರಲ್ಲದೆ, ರಾಷ್ಟ್ರಾದ್ಯಂತ ಸ್ಟೇಜ್ ಶೋಗಳನ್ನೂ ನೀಡುತ್ತಿದ್ದಾರೆ. |