ಪತ್ನಿ ನೀತಾ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಅಶ್ವಿನ್ ನಾಯ್ಕ್‌ನನ್ನು ಮಹಾರಾಷ್ಟ್ರ ಸಂಘಟಿತ ಅಪರಾಧಗಳ(ಮೋಕಾ) ನ್ಯಾಯಾಲಯ ಖುಲಾಸೆ ಮಾಡಿದೆ. ಆಗ ಬಿಎಂಸಿ ಪಾಲಿಕೆ ಸದಸ್ಯೆಯಾಗಿದ್ದ ನೀತಾ 2000ರ ನವೆಂಬರ್ 13ರಂದು ತನ್ನ ನಿವಾಸದ ಹೊರಗಡೆ ಕೊಲೆಯಾಗಿದ್ದರು. ಈ ಪ್ರಕರಣದ ಆರೋಪಿಯಾಗಿದ್ದ ಅಶ್ವಿನ್‌ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿರಿಸಲಾಗಿತ್ತು.
ಎಂಜಿನಿಯರಿಂಗ್ ಪದವೀಧರನಾಗಿರುವ ನಾಯ್ಕ್ 1994ರಲ್ಲಿ ವಿರೋಧಿ ಗ್ಯಾಂಗಿನ ಗುಂಡು ತಗಲಿದ ಬಳಿಕ ಅಂಗವಿಕಲನಾಗಿರುವ ಅಶ್ವಿನ್‌ನನ್ನು ಈತನ ವಿರುದ್ಧ ಬಾಕಿ ಉಳಿದಿರುವ ಇತರ ಅಪರಾಧ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಮರಳಿ ದೆಹಲಿಗೆ ಕರೆದೊಯ್ಯಲಾಗಿದೆ.
ನೀತಾಳಿಗೆ ಆಕೆಯ ಅಂಗರಕ್ಷಕ ಲಕ್ಷ್ಮಣ ಜಿಮಾನ್ ಎಂಬಾತನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ ಎಂದು ಸರಕಾರಿ ವಕೀಲರು ಹೇಳಿದ್ದಾರೆ. ತಿಹಾರ್ ಜೈಲಿನಲ್ಲಿ ನೀತಾ ಕೊಲೆಗಾಗಿ ಸಂಚು ಹೂಡಿದ್ದು, ಕೊಲೆಗಾಗಿ ಆರುಮಂದಿಯನ್ನು ಗೊತ್ತುಮಾಡಲಾಗಿತ್ತು. ಎಂದು ಪೊಲೀಸರು ತಿಳಿಸಿದ್ದರು. ಕೊಲೆಯ ಬಳಿಕ ಐವರನ್ನು ಬಂಧಿಸಲಾಗಿದ್ದು, ಬಳಿಕ ಇಬ್ಬರ ಬಿಡುಗಡೆಯಾಗಿತ್ತು. ಇತರ ಮೂವರಾದ ಮನೋಜ್ ಭಾಲೆಕರ್, ನೀಲ್‌ರತನ್ ಮುಖರ್ಜಿ ಮತ್ತು ಸುನಿಲ್ ಜಾಧವ್ ಎಂಬವರಿಗೆ ಶಿಕ್ಷೆಯಾಗಿದೆ.
ಆದರೆ ನೀತಾ ಕೊಲೆಯ ಸಂದರ್ಭದಲ್ಲಿ ಅಶ್ವಿನ್ ಜೈಲಿನಲ್ಲಿದ್ದ ಕಾರಣ ಅಶ್ವಿನ್ ಕೊಲೆಯಲ್ಲಿ ಭಾಗಿಯಾಗಿರಲಾರ ಎಂದು ಆತನ ಪರ ವಕೀಲರು ವಾದಿಸಿದ್ದರು.
ತನ್ನ ಅಣ್ಣ ಅಮರ್ ನಾಯಕ್ ಎನ್‌ಕೌಂಟರ್‌ನಲ್ಲಿ ಕೊಲೆಯಾದ ಬಳಿಕ ಅಶ್ವಿನ್ ತನ್ನಣ್ಣನ ಗ್ಯಾಂಗಿನ ನಾಯಕತ್ವ ವಹಿಸಿದ್ದ. ಆತ 1994ರಲ್ಲಿ ಭೂಗತನಾಗಿದ್ದ. ಎದುರಾಳಿ ಗ್ಯಾಂಗಿನ ಗುಂಡೇಟು ತಗಲಿದ ಬಳಿಕ ಜೆ.ಜೆ. ಆಸ್ಪತ್ರೆಗೆ ದಾಖಲಾಗಿದ್ದ ಅಶ್ವಿನ್ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಈತ ಬಳಿಕ ಕೆನಡಾ, ಆ ನಂತರ ದಕ್ಷಿಣ ಆಫ್ರಿಕಾ ಮತ್ತು ಸಿಂಗಾಪುರಕ್ಕೆ ಪರಾರಿಯಾಗಿದ್ದ. 1999ರಲ್ಲಿ ಈ ಬಾಂಗ್ಲಾದೇಶ ಗಡಿ ದಾಟಲು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. |