ಮುಖ್ಯ ಚುನಾವಣಾ ಆಯುಕ್ತರಿಂದ ವಜಾಗೊಳಿಸಬೇಕು ಎಂಬ ಶಿಫಾರಸ್ಸಿಗೊಳಗಾಗಿರುವ ಚುನಾವಣಾ ಆಯುಕ್ತ ನವೀನ್ ಚಾವ್ಲ ತಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಮುಖ್ಯಚುನಾವಣಾ ಆಯುಕ್ತರ ಶಿಫಾರಸ್ಸಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಚಾವ್ಲಾ ಅವರು, ಆಯೋಗವು ಕಳೆದ ಹಲವಾರು ವರ್ಷಗಳಿಂದ ಯಾವದೇ ಕಳಂಕವಿಲ್ಲದಂತೆ ಚುನಾವಣೆಯನ್ನು ನಡೆಸುತ್ತಾ ಬಂದಿದ್ದು, ಅಂತೆಯೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಆಯೋಗದ ಘನೆತೆಯು ಸರ್ವಶ್ರೇಷ್ಠವಾದುದು ಎಂಬುದಾಗಿ ಅವರು ವರದಿಗಾರರೊಂದಿಗೆ ಮಾತನಾಡುತ್ತಾ ನುಡಿದರು. ಚಾವ್ಲಾ ಅವರು ಪಕ್ಷಪಾತಿಯಾಗಿದ್ದಾರೆ ಎಂಬ ಬಿಜೆಪಿ ದೂರಿನಾದಾರದಲ್ಲಿ, ಅವರನ್ನು ವಜಾಮಾಡಲು ಮುಖ್ಯ ಚುನಾವಣಾ ಆಯುಕ್ತರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ನೀವು ಸ್ಥಾನ ತೊರೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಿಇಸಿ ಶಿಫಾರಸ್ಸು ಕುರಿತು ತನಗೆ ತಿಳಿದಿಲ್ಲ. ಈ ಕುರಿತು ತಾನೇನು ಹೇಳಲು ಬಯಸುವುದಿಲ್ಲ ಎಂದು ಅವರು ನುಡಿದರು.
ಚಾವ್ಲಾರನ್ನು ವಜಾಗೊಳಿಸಬೇಕು ಎಂಬ ಏಕಪಕ್ಷೀಯ ಶಿಫಾರಸ್ಸನ್ನು ರಾಷ್ಟ್ರಪತಿಯವರಿಗೆ ಗೋಪಾಲಸ್ವಾಮಿ ಕಳುಹಿಸಿದ್ದಾರೆ. ರಾಷ್ಟ್ರಪತಿಯವರು ಈ ಪತ್ರವನ್ನು ಪ್ರಧಾನಿಯವರಿಗೆ ಕಳುಹಿಸಿದ್ದಾರೆ. |