ಮುಂಬೈ ಮೇಲೆ ನಡೆದ ದಾಳಿ ಸಂಬಂಧ ನಾವು ನೀಡಿರುವ ಸಾಕ್ಷ್ಯಾಧಾರಗಳ ಬಗ್ಗೆ ಪಾಕಿಸ್ತಾನ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಮೂಲಕ, ಮುಂಬೈ ಮೇಲೆ ನಡೆದ ದಾಳಿ ಸಂಬಂಧ ತನಿಖೆ ನಡೆಸಿ ವಿವರವನ್ನು ಭಾರತಕ್ಕೆ ನೀಡಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತ ಅಲ್ಲಗಳೆದಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು, ಹೈಕಮೀಷನರ್ ಶಾಹೀದ್ ಮಲಿಕ್ ಭಾರತದ ಗೃಹಮಂತ್ರಿ ಪಿ.ಚಿದಂಬರಂ ಅವರಿಗೆ ಗುರುವಾರ ಈ ಕುರಿತು ಮಾಹಿತಿ ನೀಡಿದ್ದಾರೆಂದು ತಿಳಿಸಿದ್ದರು. ಆದರೆ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅದನ್ನು ನಿರಾಕರಿಸಿದ್ದಾರೆ.
ಈ ಮಧ್ಯೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಅಮೆರಿಕದ ವಿಶೇಷ ರಾಯಭಾರಿಯಾಗಿರುವ ರಿಚರ್ಡ್ ಹಾಲ್ ಬ್ರೂಕ್ ಶೀಘ್ರವೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. |