ತಮಿಳುಚಿತ್ರರಂಗದ ಖ್ಯಾತ ಹಾಸ್ಯ ನಟ ಹಾಗೂ ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ದಾಖಲೆ ಸ್ಥಾಪಿಸಿರುವ ತಾಯ್ ನಾಗೇಶ(76) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.
ಹಾಸ್ಯ ಪಾತ್ರಕ್ಕೆ ಹೆಸರಾದ ನಾಗೇಶ್ ಅವರನ್ನು ಹಾಲಿವುಡ್ ನಟ ಡ್ಯಾನಿ ಕಯೆ ಅವರೊಂದಿಗೆ ಹೋಲಿಸಲಾಗುತ್ತಿತ್ತು. 1933ರಲ್ಲಿ ತಿಪಟೂರಿನಲ್ಲಿ ಕನ್ನಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾಗೇಶ್ ಆಲಿಯಾಸ್ ಗುಂಡುರಾವ್, 60-70ರ ದಶಕದ ಮಧ್ಯಾವಧಿಯಲ್ಲಿ ತಮಿಳು ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ನಟರಾಗಿದ್ದರು. ಕನ್ನಡದಲ್ಲೂ ಪೆದ್ದಗೆದ್ದ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
ಬಣ್ಣದ ಬದುಕಿನತ್ತ ಆಕರ್ಷಿತರಾಗುವ ಮುನ್ನ ಅವರು ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರು. ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ನಾಗೇಶ್ ತಾಯ್ ನಾಟಕದಿಂದ ಪ್ರಸಿದ್ದರಾದ ಕಾರಣ ಅವರಿಗೆ ತಾಯ್ ನಾಗೇಶ ಎಂಬ ಹೆಸರು ಬಂದಿತು. ಸುಮಾರು 5ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಎಂ.ಜಿ.ಆರ್., ಶಿವಾಜಿಗಣೇಶನ್, ರಜನೀಕಾಂತ್, ಕಮಲ್ ಹಾಸನ್ ಅವರಂಥ ಮೇರು ನಟ ಅವರೊಂದಿಗೆ ಸಹನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ಕಮಲ್ ಹಾಸನ್ ಅವರ ದಶಾವತಾರಂ ನಾಗೇಶ್ ಅಭಿನಯದ ಕೊನೆಯ ಚಿತ್ರ. ನಾಗೇಶ ಅವರು ನಟ ಆನಂದ ಬಾಬು ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ. |