ಕಳೆದ ವಾರ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ(ಏಮ್ಸ್) ಹೃದಯ ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಪ್ರಧಾನಿ ಮನಮೋಹನ್ ಸಿಂಗ್ ಅವರು ಆರೋಗ್ಯದಿಂದ ಚೇತರಿಸಿಕೊಂಡಿದ್ದು, ಅವರನ್ನು ಭಾನುವಾರ ಬೆಳಿಗ್ಗೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಯಿತು.
76ರ ಹರೆಯದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವೈದ್ಯರು ಶುಕ್ರವಾರದಂದು ಪೂರ್ಣಪ್ರಮಾಣದಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲು ನಿರ್ಧರಿಸಲಾಯಿತು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ದೀರ್ಘಕಾಲದಿಂದ ಬಾಧಿಸುತ್ತಿರುವ ಸಕ್ಕರೆ ಖಾಯಿಲೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಪ್ರಧಾನಿಯವರು ಕಟ್ಟುನಿಟ್ಟಿನ ಪಥ್ಯ ನಿಯಮ ಪಾಲಿಸಬೇಕಾಗಿದೆ. ಆರು ವಾರಗಳ ಬಳಿಕ ಅವರು ಮತ್ತೆ ಎಂದಿನಂತೆ ಓಡಾಟ ನಡೆಸಬಹುದಾಗಿದೆ ಎಂದು ಡಾ.ಶ್ರೀನಾಥ್ ರೆಡ್ಡಿ ವಿವರಿಸಿದ್ದಾರೆ.
ಜನವರಿ 24ರಂದು ಪ್ರಧಾನಿ ಅವರಿಗೆ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಜನವರಿ 28ರಂದು ತುರ್ತುನಿಗಾ ಘಟಕಕ್ಕೆ ಅವರನ್ನು ವರ್ಗಾಯಿಸಲಾಗಿತ್ತು. |