ಭಾನುವಾರ ಗೋವಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನವೊಂದನ್ನು ಅದರಲ್ಲಿದ್ದ ಮೂವರು ಪ್ರಯಾಣಿಕರು ಅಪಹರಿಸುವ ಇಲ್ಲವೇ ಸ್ಫೋಟಿಸುವ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. ಆರೋಪಿಗಳು ಕ್ಷುಲ್ಲಕ ಕಾರಣಕ್ಕಾಗಿ ಜಗಳಕ್ಕೆ ನಿಂತು ಇಂತಹ 'ಸಾಹಸ'ದ ಮಾತುಗಳನ್ನಾಡಿದ್ದಾರೆಂದು ಶಂಕಿಸಲಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ಗೋವಾದಿಂದ ದೆಹಲಿ ತಲುಪುವ ಹೊತ್ತಿಗೆ ಇನ್ನೂ ಇಳಿಯಲು 10 ನಿಮಿಷ ಇರುವಂತೆ ಬೆದರಿಕೆ ಬಂದ ಹಿನ್ನಲೆಯಲ್ಲಿ ಪೈಲಟ್ ಸೂಕ್ತ ಮಾರ್ಗದರ್ಶನದೊಂದಿಗೆ ಸಂಜೆ 5.30ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದ. ತಕ್ಷಣ ಎನ್‌ಎಸ್‌ಜಿ ಸೇರಿದಂತೆ ಇತರ ಭದ್ರತಾ ಸಿಬಂದಿಗಳು ವಿಮಾನವನ್ನು ಸುತ್ತುವರಿದರು. ಸುಮಾರು 2 ಗಂಟೆಗಳ ಕಾಲ ಪ್ರಯಾಣಿಕರಿಗೆ ವಿಮಾನದಿಂದ ಇಳಿಯಲು ಅವಕಾಶ ನೀಡಲಾಗಿರಲಿಲ್ಲ. ವಿಮಾನ ನಿಲ್ಧಾಣದ ಅಧಿಕಾರಿಗಳು ನಂತರ ಸಭೆ ನಡೆಸಿ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂಬುದನ್ನು ತಿಳಿದುಕೊಂಡು ಪ್ರಯಾಣಿಕರನ್ನು ಮುಕ್ತಗೊಳಿಸಿದರು. ಅಲ್ಲದೇ ಆರೋಪಿಗಳನ್ನುವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿಗಳ ವಿವರಗಳನ್ನು ಅಧಿಕೃತವಾಗಿ ಬಹಿರಂಗ ಪಡಿಸಲಾಗಿರದಿದ್ದರೂ ಮೂಲಗಳ ಪ್ರಕಾರ ಜಿತೇಂದ್ರ ಕುಮಾರ್ ಮೊಹಲ್ಲಾ (16E), ಸಮೀರ್ ಉಪ್ಪಲ್ (16B) ಮತ್ತು ಹರ್‌ಪ್ರೀತ್ ಆನಂದ್ (29D) ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಕ್ಷುಲ್ಲಕ ಕಾರಣಕ್ಕಾಗಿ ತಗಾದೆ ತೆಗೆದು ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ. ಆರೋಪಿಯೊಬ್ಬ ಹಿಂದಿನ ಸೀಟಿನಿಂದ ಖಾಲಿಯಿದ್ದ ಮುಂದಿನ ಸೀಟಿಗೆ ಬಂದು ಕುಳಿತಿದ್ದ. ನಂತರ ಮೂರೂ ಸೀಟುಗಳಲ್ಲಿ ಮಲಗಲು ಯತ್ನಿಸಿದ. ಆದರೆ ಇದಕ್ಕೆ ಗಗನ ಸಖಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಗಲಾಟೆ ಆರಂಭವಾಗಿತ್ತು. ಇವರು ಮದ್ಯ ಸೇವಿಸಿದ್ದು, ನಂತರ ಚಾಕು ಹಿಡಿದು ಬೆದರಿಕೆ ಹಾಕಿದ್ದರೆಂದೂ ಹೇಳಲಾಗುತ್ತಿದೆ.
ವಿಮಾನವನ್ನು ಸಂಪೂರ್ಣ ತಪಾಸಣೆಗೊಳಿಸಿ ಯಾವುದೇ ಅಪಾಯವಿಲ್ಲ ಎಂದು ಅರಿತು ಕೊಂಡ ನಂತರ ರಾತ್ರಿ 8.30ಕ್ಕೆ ಎಲ್ಲವನ್ನೂ ಸುಖಾಂತ್ಯಗೊಳಿಸಲಾಯಿತು. ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂರು ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
|