ಶಸ್ತ್ರಸಜ್ಜಿತ ನಕ್ಸಲರ ಗುಂಪೊಂದು ನಡೆಸಿದ ಗುಂಡಿನ ದಾಳಿಗೆ ಓರ್ವ ಸಬ್-ಇನ್ಸ್‌ಪೆಕ್ಟರ್ ಸೇರಿದಂತೆ 15 ಮಂದಿ ಮಹಾರಾಷ್ಟ್ರ ಪೊಲೀಸರು ಬಲಿಯಾಗಿದ್ದಾರೆ. ನಾಗ್ಪುರದ ಗಡಚಿರೋಲಿ ಜಿಲ್ಲೆಯ ಮಾರ್ಕೆಗಾನ್ ಎಂಬಲ್ಲಿ ಭಾನುವಾರ ಈ ದುರ್ಘಟನೆ ಸಂಭವಿಸಿದೆ.
ಪೊಲೀಸರ ಮೇಲೆ ಯದ್ವಾತದ್ವಾ ಗುಂಡು ಹಾರಿಸಿ ಹತ್ಯೆಗೈದ ನಂತರ ನಕ್ಸಲರು ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಎಂಟು ಎ.ಕೆ. 47, ಎರಡು ಅಟೋಮ್ಯಾಟಿಕ್ ರೈಫಲ್‌ಗಳು, ನಾಲ್ಕು ಸೆಲ್ಫ್ ಲೋಡಿಂಗ್ ರೈಫಲ್ಸ್, ಒಂದು ಫಿಸ್ತೂಲ್ ಮತ್ತು ಎರಡು ಇಂಚಿನ ಮೋರ್ಟಾರ್‌ಗಳನ್ನು ಮೃತ ಪೊಲೀಸರ ಬಳಿಯಿಂದ ಅಪಹರಿಸಲಾಗಿದೆ.
ಭಾನುವಾರ ತಡರಾತ್ರಿ ಪೊಲೀಸರ ಮೃತದೇಹಗಳನ್ನು ಕಾಡಿನಿಂದ ತರಲಾಗಿದೆ. ಪೊಲೀಸರು ನಕ್ಸಲರ ತಲಾಶೆಯಲ್ಲಿದ್ದಾಗ ಏಕಾಏಕಿ ದಾಳಿ ನಡೆಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಮೃತರಾದವರ ವಿವರ ಇಂತಿದೆ: ಉಪೇಂದ್ರ ಗುಧೇದ್ಕರ್ (ಎಸ್‌ಐ), ಬೈಸಾಕ್ ಪಡೋಡಿ, ಸುಭಾಷ್ ಭೋಗ್ರೆ, ಸುರೇಶ್ ನೈತಮ್, ಮಾಧವ್ ಪೋತೆ, ಭಾಗು ಕೋರಮ್, ಚೌಸ್ ಅಮರ್ ವಾಡತ್ಕರ್, ದುರ್ಯೋಧರ್ ಹಲಾಮೆ, ಪೊಲೀಸ್ ಹವಾಲ್ದಾರ್ ಕಾಳಿದಾಮ್ ಹಲಾಮೆ, ರೋಹಿದಾಸ್ ಕುಮ್ರೆ, ನಾನು ತುಬಾರಿ, ರೂಪೇಶ್ ಪೊಯಿಂದ್ರೆ, ದಿಲೀಪ್ ಭುಕೆ, ಮನೀಷ್ ಕಲ್ಯಾಣ್ ಪಲ್ಲಿವಾರ್ ಮತ್ತು ಸುಧಾಕರ್ ಉಕರ್ಪಾತೆ.
ಘಟನೆಯಲ್ಲಿ ಇತರ ಯಾವುದೇ ಪೊಲೀಸ್ ಸಿಬಂದಿ ಗಾಯಗೊಂಡ ವರದಿಗಳಿಲ್ಲ. ಜತೆಗೆ ನಕ್ಸಲರ ಗುಂಪಿನಲ್ಲಿ ಸಾವಿಗೀಡಾದ ಅಥವಾ ಗಾಯಗೊಂಡ ಬಗ್ಗೆಯೂ ಮಾಹಿತಿಗಳಿಲ್ಲ. ಈ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
|