ಉತ್ತರಪ್ರದೇಶ ಪೊಲೀಸರ ವಶದಲ್ಲಿರುವ ಇಬ್ಬರು ನಿಷೇಧಿತ ಲಷ್ಕರ್ ಎ ತೊಯ್ಬಾ ಉಗ್ರರನ್ನು ಮುಂಬೈ ದಾಳಿ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಅಮೆರಿಕ ಬೇಹುಗಾರಿಕೆ ದಳ(ಎಫ್‌ಬಿಐ)ದ ಅಧಿಕಾರಿಗಳು ಭಾರತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬಂಧಿತ ಫಾಹಿಮ್ ಅರ್ಷದ್ ಅನ್ಸಾರಿ ಮತ್ತು ಸಬಾವುದ್ದೀನ್‌ನನ್ನು ಮುಂಬೈ ದಾಳಿ ವಿಚಾರಣೆ ಕುರಿತಂತೆ 2008ರ ಡಿಸೆಂಬರ್‌ನಲ್ಲಿ ಮುಂಬೈಗೆ ಕರೆತರಲಾಗಿದ್ದ ಹಿನ್ನೆಲೆಯಲ್ಲಿ ಎಫ್‌ಬಿಐ ಅಧಿಕಾರಿಗಳು ಈ ಮನವಿ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅನ್ಸಾರಿ ಮತ್ತು ಸಬಾವುದ್ದೀನ್‌ರನ್ನು ಕೇಂದ್ರ ಭದ್ರತಾ ಸಂಸ್ಥೆಯವರು 2008ರ ಫೆಬ್ರುವರಿ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಂಧಿಸಿದ್ದರು. ಉತ್ತರ ಪ್ರದೇಶದ ರಾಮ್ ಪುರದಲ್ಲಿನ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ 2008ರ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಫಾಹಿಮ್ ಮತ್ತು ಇತರರು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈತನನ್ನು 2008ರ ಫೆ.12ರಂದು ಬಂಧಿಸಲಾಗಿತ್ತು. ಇವನ ಜೊತೆ ಇನ್ನಿತರ ಐದು ಜನ ಲಷ್ಕರ್ ಎ ತೊಯ್ಬಾ ಉಗ್ರರನ್ನು ಬಂಧಿಸಲಾಗಿತ್ತು.
ಅಲ್ಲದೇ 2005ರಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್‌ಎಸ್)ಮೇಲೂ ನಡೆದ ದಾಳಿ ಪ್ರಕರಣದಲ್ಲಿ ತಾನು ಶಾಮೀಲಾಗಿರುವುದಾಗಿ ಸಬಾವುದ್ದೀನ್ ವಿಚಾರಣೆ ವೇಳೆ ತಿಳಿಸಿದ್ದ.
ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಅಮಿರ್ ಕಸಬ್‌ನನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಈತನ ಹೆಸರನ್ನು ಬಾಯ್ಬಿಟ್ಟಿದ್ದ. ದಾಳಿಯ ಬಳಿಕ ಕಬ್‌ನನ್ನು ಎಫ್‌ಬಿಐ ಅಧಿಕಾರಿಗಳು ಸತತ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.
|