ಸಚಿವರುಗಳು ಹಾಗೂ ಅವರ ಸಂಬಂಧಿಗಳ ಆಸ್ತಿ ವಿವರವನ್ನು ಬಹಿರಂಗಪಡಿಸದೇ ಇರಲು ಪ್ರಧಾನಿ ಕಾರ್ಯಾಲಯ ನಿರ್ಧರಿಸಿದ್ದು, ಮಾಹಿತಿ ಹಕ್ಕು(ಆರ್‌ಟಿಐ)ಕಾಯ್ದೆ ಅಡಿ ಇದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದೆ.
ಸುಭಾಷ್ ಚಂದ್ರ ಅಗರವಾಲ್ ಎಂಬುವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯ ಈ ರೀತಿ ಉತ್ತರಿಸಿದೆ. ಆರ್‌ಟಿಐ ಕಾಯ್ದೆಯ 8ನೇ ಕಲಂ ಅಡಿ ಇದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿರುವ ಪ್ರಧಾನಿ ಕಾರ್ಯಾಲಯ, ಈ ಕಾರಣಕ್ಕೆ ಮಾಹಿತಿ ನೀಡಲು ನಿರಾಕರಿಸಿದೆ.
ಆರ್‌ಟಿಐ ಅರ್ಜಿಗಳಿಗೆ ಉತ್ತರಿಸಲು ಸಂಪುಟ ಸಚಿವಾಲಯಕ್ಕೆ ಎಲ್ಲ ಮಾಹಿತಿಗಳನ್ನು ನೀಡಿದ್ದ ಪ್ರಧಾನಿ ಕಾರ್ಯಾಲಯ ದಿಢೀರ್ ಎಂದು ಈ ನಿರ್ಧಾರ ಬದಲಿಸಿ ಮಾಹಿತಿ ತಿರಸ್ಕರಿಸಿದೆ.
ಅಗರವಾಲ್ ಕಳೆದ ವರ್ಷ ಆರ್‌ಟಿಐ ಅರ್ಜಿ ಸಲ್ಲಿಸಿ, ಎಲ್ಲ ಕೇಂದ್ರ ಸಚಿವರು ಹಾಗೂ ಅವರ ಸಂಬಂಧಿಗಳು ಎರಡು ವರ್ಷಗಳಲ್ಲಿ ಸಂಪಾದಿಸಿದ್ದ ಆಸ್ತಿ ವಿವರ ಬಹಿರಂಗಪಡಿಸುವಂತೆ ಕೇಳಿಕೊಂಡಿದ್ದರು.
ಪ್ರಧಾನಿ ಕಾರ್ಯಾಲಯಕ್ಕೆ ಈ ಅರ್ಜಿ ರವಾನಿಸಲಾಗಿತ್ತು. 2008ರ ಮೇ 19ರಂದು ಪ್ರಧಾನಿ ಕಾರ್ಯಾಲಯ ಸಚಿವರ ಆಸ್ತಿಗೆ ಸಂಬಂಧಿಸಿ ವಿವರಗಳನ್ನು ಸಂಪುಟ ಸಚಿವಾಲಯಕ್ಕೆ ಕಳುಹಿಸಿತ್ತು.
ಆದರೆ ಆರು ತಿಂಗಳ ನಂತರ ಡಿಸೆಂಬರ್ 17ರಂದು, ಆರ್‌ಟಿಐ ಕಾಯ್ದೆ ಅನ್ವಯ ನೀವು ಕೇಳಿದ ವಿವರವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿರುವುದಾಗಿ ಅಗರವಾಲ್ ಹೇಳಿದರು. ಆರ್‌ಟಿಐ ಕಾಯ್ದೆ ಅಡಿ ಅದಕ್ಕೆ ವಿನಾಯ್ತಿ ನೀಡಲಾಯಿತು ಎಂದು ನನಗೆ ತಿಳಿಸಲಾಯಿತು ಎಂದರು.
ಆದರೆ ಪ್ರಧಾನಿ ಕಾರ್ಯಾಲಯ ಆರ್‌ಟಿಐ ಕಾಯ್ದೆ ಬಗ್ಗೆ ಯು ಟರ್ನ್ ತೆಗೆದುಕೊಂಡ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಿ ಸಿಐಸಿಯ ವಾಜಾಹತ್ ಹಬಿಬುಲ್ಲಾ ಅವರಿಗೆ 2009ರ ಜನವರಿ 30ರಂದು ಇ-ಮೇಲ್ ಕಳುಹಿಸಿರುವುದಾಗಿ ತಿಳಿಸಿದ್ದಾರೆ. |