ನವದೆಹಲಿ: ಕಳೆದ ವರ್ಷ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮಿರ್ ಕಸಬ್‌ನನ್ನು ಫೆಬ್ರುವರಿ 13ರವರೆಗೆ ಪೊಲೀಸ್ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
ದಕ್ಷಿಣ ಮುಂಬೈನ ಕಾಮಾ ಮತ್ತು ಅಲ್‌ಬ್ಲೆಸ್ ಆಸ್ಪತ್ರೆಯ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿರುವ ಪಾಕ್ ಮೂಲದ ಉಗ್ರ ಕಸಬ್‌ನನ್ನು ಮತ್ತಷ್ಟು ವಿಚಾರಣೆಗೆ ಗುರಿಪಡಿಸುವ ಅಂಗವಾಗಿ ಇಂದು ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಲಾಗಿದೆ. ಈವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ಆತನ ಬಂಧನದ ಅವಧಿ ಸೋಮವಾರ ಅಂತ್ಯಗೊಂಡಿತ್ತು. ಆ ಹಿನ್ನೆಲೆಯಲ್ಲಿ ಕಸಬ್‌ನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನವೆಂಬರ್ 26ರಿಂದ ಪೊಲೀಸ್ ವಶದಲ್ಲಿರುವ ಕಸಬ್ ಮೇಲೆ ಮುಂಬೈ ಪೊಲೀಸರು ದಾಳಿ ಕುರಿತಂತೆ ಸುಮಾರು 12ಕೇಸುಗಳನ್ನು ದಾಖಲಿಸಿದ್ದಾರೆ. ನವೆಂಬರ್ 26ರ ರಾತ್ರಿ ವಾಣಿಜ್ಯನಗರಿಯ ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಕಸಬ್ ಹಾಗೂ ಮತ್ತೊಬ್ಬ ಉಗ್ರ ಇಸ್ಮಾಲ್ ಖಾನ್ ದಾಳಿ ನಡೆಸಿದ ಪರಿಣಾಮ, 58ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಭಾರತದಲ್ಲಿ ಬಂಧನದಲ್ಲಿರುವ ಅಜ್ಮಲ್ ಕಸಬ್ ಸಾವನ್ನಪ್ಪಿರುವ ಸಾಧ್ಯತೆ ಇರುವುದಾಗಿ ಹೇಳಿರುವ ಪಾಕಿಸ್ತಾನದ ಆರೋಪವನ್ನು ಮಹಾರಾಷ್ಟ್ರ ಸರ್ಕಾರ ಸಾರಸಗಟಾಗಿ ತಳ್ಳಿಹಾಕಿದ್ದು, ಕಸಬ್ ಜೀವಂತವಾಗಿದ್ದು, ಮುಂಬೈ ಪೊಲೀಸರ ಆರೈಕೆಯಲ್ಲಿ ಆರೋಗ್ಯದಿಂದ ಇದ್ದಾನೆ ಎಂದು ತಿಳಿಸಿದೆ. |