ಚುನಾವಣಾ ಆಯುಕ್ತ ಚಾವ್ಲಾ ಅವರನ್ನು ವಜಾಗೊಳಿಸಬೇಕು ಎಂಬ ಮುಖ್ಯಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರ ಕ್ರಮದ ವಿರುದ್ಧ ಹರಿಹಾಯ್ದಿರುವ ಕೇಂದ್ರ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್, ನೀವು ಚುನಾವಣಾ ಆಯೋಗ ಕೆಲಸ ಮಾತ್ರ ಮಾಡಿ, ಅದನ್ನು ಬಿಟ್ಟು ರಾಜಕೀಯ ವ್ಯಕ್ತಿಯಾಗಲು ಹೊರಡುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.ಆ ನಿಟ್ಟಿನಲ್ಲಿ ಮುಖ್ಯಚುನಾವಣಾ ಆಯುಕ್ತ ಗೋಪಾಲಸ್ವಾಮಿ ಹಾಗೂ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರ ನಡುವೆ ನಡೆಯುತ್ತಿರುವ ಕದನಕ್ಕೆ ಸಚಿವರು ಚಾವ್ಲಾ ಅವರಿಗೆ ಬೆಂಬಲ ನೀಡಿದಂತಾಗಿದೆ. ಆ ಮೂಲಕ ಚುನಾವಣಾ ಆಯುಕ್ತ ನವೀನ್ ಚಾವ್ಲಾರನ್ನು ಆಯೋಗದಿಂದ ತೆಗೆದು ಹಾಕಬೇಕು ಎಂಬುದಾಗಿ ಮುಖ್ಯಚುನಾವಣಾ ಆಯುಕ್ತ ಗೋಪಾಲಸ್ವಾಮಿ ಅವರು ರಾಷ್ಟ್ರಪತಿಗಳಿಗೆ ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಲು ನಿರ್ಧಸಿರುವುದನ್ನು ಸೂಚ್ಯವಾಗಿ ಹೇಳಿದಂತಾಗಿದೆ.ಇತ್ತೀಚೆಗಷ್ಟೇ ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಅವರು, ಚಾವ್ಲಾ ಅವರು ರಾಜಕೀಯ ಪಕ್ಷವೊಂದರ (ಕಾಂಗ್ರೆಸ್) ವಕ್ತಾರರಂತೆ ವರ್ತಿಸುವತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದರು. ರಾಷ್ಟ್ರಪತಿಗಳು ಈ ಸಂಬಂಧ ಪ್ರಧಾನ ಮಂತ್ರಿಯವರಿಗೆ ಪತ್ರವನ್ನೂ ಬರೆದಿದ್ದರು.ಇದೀಗ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಕೇಂದ್ರ ಸರ್ಕಾರ ಚಾವ್ಲಾ ಬೆಂಬಲಕ್ಕೆ ನಿಂತಿದ್ದು, ಗೋಪಾಲಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.ಮುಖ್ಯಚುನಾವಣಾ ಆಯುಕ್ತ ಗೋಪಾಲಸ್ವಾಮಿಯವರು, ನಿಮ್ಮ ಕೆಲಸ ಮಾತ್ರ ಮಾಡಿ ಆದರೆ ಅದನ್ನು ಬಿಟ್ಟು ರಾಜಕೀಯ ಮಾಡುವ ಉಸಾಬರಿ ನಿಮಗೆ ಬೇಡ ಎಂದು ಭಾರದ್ವಾಜ್ ಕಟುವಾಗಿ ಹೇಳಿದ್ದಾರೆ.ಅಲ್ಲದೇ ಏಪ್ರಿಲ್ 20ರಂದು ಗೋಪಾಲಸ್ವಾಮಿಯವರು ಚುನಾವಣಾ ಆಯುಕ್ತ ಹುದ್ದೆಯಿಂದ ನಿವೃತ್ತರಾಗಲಿದ್ದು, ಆ ಸ್ಥಾನಕ್ಕೆ ಚಾವ್ಲಾ ಅವರು ಬರಲಿದ್ದಾರೆ ಎಂಬುದನ್ನೂ ಕೂಡ ಅವರು ಈ ಸಂದರ್ಭದಲ್ಲಿ ತಿಳಿಸಿದರು. |