ನಗರದ ಗೋವಿಂದಪುರ್ ಪ್ರದೇಶದಲ್ಲಿನ ಮಿಷನರಿ ಶಾಲೆಯೊಂದರಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವುದನ್ನು ಖಂಡಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಶಾಲೆಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 26ರ ಪ್ರಜಾಪ್ರಭುತ್ವ ದಿನಾಚರಣೆ ಸಂದರ್ಭದಲ್ಲಿ ಮಿಷನರಿ ಶಾಲೆಯಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಆ ಘಟನೆ ಇಂದು ಮತ್ತಷ್ಟು ಬಿಸಿಯೇರುವ ಮೂಲಕ ಎಬಿವಿಪಿ ಕಾರ್ಯಕರ್ತರು ಶಾಲೆಯೊಳಕ್ಕೆ ನುಗ್ಗಿ ದಾಂಧಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಸುಮಾರು 15ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಜೈದೀಪ್ ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಲ್ಲದೇ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲ ಥೋಮಸ್ ಮಾಲೆಂಚೆರುವಿಲ್ಲಾ ಅವರನ್ನೂ ಕೂಡ ಬಂಧಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಘಟನೆ ವಿವರ: ಪ್ರಜಾಪ್ರಭುತ್ವ ದಿನಾಚರಣೆಯಂದು ಸೈಂಟ್ ಥೋಮಸ್ ಕಾನ್ವೆಂಟ್ ಶಾಲೆಯಲ್ಲಿ ನ್ಯಾಶನಲ್ ಪ್ಲ್ಯಾಗ್ ಹಾರಿಸಿದ ನಂತರ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ (ಪಿಟಿಐ) ಅರವಿಂದ ಪ್ರಕಾಶ್ ಗುಪ್ತಾ ಅವರು ಸಂಪ್ರದಾಯದಂತೆ ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿದ್ದರು. ಏತನ್ಮಧ್ಯೆ ಶಾಲಾ ಪ್ರಾಂಶುಪಾಲ ರಾಷ್ಟ್ರಗೀತೆ ಹಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಶಾಲೆಯ ಪ್ರಾರ್ಥನಾ ಗೀತೆಯನ್ನು ಹಾಡುವಂತೆ ಒತ್ತಾಯಿಸಿದ್ದರು.
ಆದರೆ ಗುಪ್ತಾ ಅವರು ರಾಷ್ಟ್ರಗೀತೆಯನ್ನು ಪೂರ್ಣವಾಗಿ ಹಾಡಿದ್ದರು. ನಂತರ ಸಿಟ್ಟಿಗೆದ್ದ ಪ್ರಾಂಶುಪಾಲರು ಗುಪ್ತಾ ಅವರನ್ನು ಕೆಲಸದಿಂದಲೇ ವಜಾಗೊಳಿಸಿರುವುದಾಗಿ ಸ್ಥಳದಲ್ಲೇ ಘೋಷಿಸಿದ್ದರು ಎಂದು ವಿಶ್ವಹಿಂದೂ ಪರಿಷತ್ ವರಿಷ್ಠ ದೇವೇಂದ್ರ ಸಿಂಗ್ ರಾವತ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಈ ಸಂದರ್ಭದಲ್ಲಿ ಗುಪ್ತಾ ಕೂಡ ಹಾಜರಿದ್ದರು. ರಾಷ್ಟ್ರಗೀತೆಗೆ ಅವಮಾನ ಮಾಡಿದ್ದ ಗೋವಿಂದಪುರ್ ಶಾಲೆಯ ವಿರುದ್ಧ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು. |