ಆರರ ಹರೆಯದ ಬಾಲಕಿಯನ್ನು ಅಮಾನವೀಯವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ 6ರ ಪೋರಿಯೊಬ್ಬಳಿಗೆ ಪೊಲೀಸ್ ಅಧಿಕಾರಿಗಳು ಚಿತ್ರಹಿಂಸೆ ನೀಡುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಮೂಲಕ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿ (ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್)ಗಳನ್ನು ಅಮಾನತು ಮಾಡಿರುವುದಾಗಿ ಸರ್ಕಾರ ಹೇಳಿದೆ.
ದಲಿತ ಸಮುದಾಯಕ್ಕೆ ಸೇರಿದ ಬಾಲಕಿಯ ವಿರುದ್ಧ ಪೊಲೀಸರು ನಡೆದುಕೊಂಡು ವರ್ತನೆ ಬಗ್ಗೆ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಾಯಾವತಿ ಶೀಘ್ರವೇ ಕಾರ್ಯಪ್ರವೃತ್ತರಾಗಿದ್ದರು.
6ರ ಹರೆಯದ ಹುಡುಗಿ ಸ್ಥಳೀಯ ಅಂಗಡಿಯೊಂದರಿಂದ 250ರೂಪಾಯಿಯನ್ನು ಕಳವು ಮಾಡಿದ್ದು, ಬಾಲಕಿಯನ್ನು ಸೆರೆ ಹಿಡಿದ ಪೊಲೀಸರು ಆಕೆಯ ಕಿವಿ, ಕೂದಲನ್ನು ಜಗ್ಗಿ ಹೊಡೆದಿರುವುದಾಗಿ ಕೆಲವು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರ ಈ ಕೃತ್ಯವನ್ನು ದೃಶ್ಯ ಮಾಧ್ಯಮಗಳು ಸೆರೆ ಹಿಡಿದು ಪ್ರಸಾರ ಮಾಡುವ ಮೂಲಕ ಉತ್ತರ ಪ್ರದೇಶ ಸರ್ಕಾರ ಇರಿಸುಮುರಿಸಿಗೆ ಒಳಗಾಗಿತ್ತು.
ಆದರೆ ದೋಷಿತ ಪೊಲೀಸರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಆದರೆ ಘಟನೆಯ ಕುರಿತು ಪೂರ್ಣ ಮಾಹಿತಿ ಕಲೆ ಹಾಕಿದ ಇಟಾವಾ ಪೊಲೀಸ್ ವರಿಷ್ಠಾಕಾರಿ, ತನಿಖೆ ನಡೆಸಿ, ಸಾಕ್ಷ್ಯವನ್ನು ಪರಿಶೀಲಿಸಿದ ನಂತರ ಆರೋಪಿ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. |