ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮಂಗಳವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಮತ್ತು ಆಯುಕ್ತ ನವೀನ್ ಚಾವ್ಲಾ ಅವರು ಆರೋಪ-ಪ್ರತ್ಯಾರೋಪಗಳ ನಂತರ ಮೊದಲ ಬಾರಿಗೆ ಮುಖಾಮುಖಿಯಾದರು.
ಚಾವ್ಲಾ ಅವರು ರಾಜಕೀಯ ಪಕ್ಷವೊಂದರ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದು ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಗೋಪಾಲಸ್ವಾಮಿ ಅವರು, ರಾಷ್ಟ್ರಪತಿಗಳಿಗ ಶಿಫಾರಸು ಪತ್ರ ಕಳುಹಿಸಿದ್ದರು. ಬಳಿಕ ಸಾಕಷ್ಟು ವಿವಾದ ಹುಟ್ಟಿಕೊಂಡಿತ್ತು. ಕೇಂದ್ರ ಸರ್ಕಾರ ಕೂಡ ಚಾವ್ಲಾಗೆ ಬೆಂಬಲ ನೀಡಿತ್ತು.
ಇದೀಗ ಜಟಾಪಟಿಯ ನಂತರ ಮೊದಲ ಬಾರಿಗೆ ಗೋಪಾಲಸ್ವಾಮಿ ಹಾಗೂ ಚಾವ್ಲಾ ಅವರು ಜತೆ, ಜತೆಯಾಗಿ ಆಗಮಿಸಿದಾಗ ಒಬ್ಬರಿಗೊಬ್ಬರು ನೇರವಾಗಿ ನಗುಮುಖದ ದರ್ಶನ ನೀಡದ ಇಬ್ಬರ ಮುಖಾಮುಖಿಯ ದೃಶ್ಯವನ್ನು ಮಾಧ್ಯಮದ ಕ್ಯಾಮರಾಗಳು ಸೆರೆಹಿಡಿದ್ದವು.
ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಲೋಕಸಭೆಗೆ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಿತು.
ಏಳು ರಾಷ್ಟ್ರೀಯ ಪಕ್ಷಗಳು ಹಾಗೂ 40 ರಾಜ್ಯ ಮಟ್ಟದ ಪ್ರಾದೇಶಿಕ ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಿದ್ದವು. ಫೆಬ್ರುವರಿ 4ರಂದು ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಆಯುಕ್ತರ ಜೊತೆ ಸಮಗ್ರವಾಗಿ ಆಯೋಗ ಚರ್ಚೆ ನಡೆಸಲಿದೆ. ಆಯಾ ರಾಜ್ಯಗಳಲ್ಲಿನ ಮತದಾರರ ಗುರುತುಚೀಟಿ ಪ್ರಕ್ರಿಯೆ ಹಾಗೂ ಇನ್ನಿತರೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಆಯೋಗ ಪರಿಶೀಲನೆ ನಡೆಸಲಿದೆ. |