ಭಾರತದ ಅತ್ಯುನ್ನತ ಬೇಹುಗಾರಿಕಾ ಸಂಸ್ಥೆಯಾದ 'ರಾ'ನ ಹಿರಿಯ ಅಧಿಕಾರಿಯೊಬ್ಬರು ಕರೋಲ್‌ಬಾಗ್ ಹೊಟೇಲೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿಯೇ ಮಂಗಳವಾರ ಸಿಬಿಐ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
'ರಾ' ಹಿರಿಯ ಅಧಿಕಾರಿಯಾದ ಡಾ.ಎ.ಎಸ್.ನಾರಾಯಣ ರಾವ್ ಅವರನ್ನು ಹೊಟೇಲಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಬಂಧಿಸುವ ಮೂಲಕ, ದೇಶದ ಪ್ರಮುಖ ಗುಪ್ತಚರ ಇಲಾಖೆಯೂ ಕೂಡ ಭ್ರಷ್ಟಾಚಾರದ ಪಟ್ಟಿಯಲ್ಲಿ ಸೇರುವಂತಾಗಿದೆ.
'ರಾ'ನ ತಾಂತ್ರಿಕ ವಿಭಾಗದ ಹಿರಿಯ ವಿಜ್ಞಾನಿಯಾಗಿರುವ ನಾರಾಯಣ ರಾವ್ ಅವರು ಚೆನ್ನೈ ಮೂಲದ ಉತ್ಪಾದನಾ ಘಟಕವೊಂದಕ್ಕೆ ರಫ್ತು ಪರವಾನಗಿ ನೀಡುವ ಸಂಬಂಧ 8 ಲಕ್ಷ ರೂ.ಗಳನ್ನು ಕೇಳಿದ್ದರು. ಒಂದು ಲಕ್ಷ ರೂಪಾಯಿಯನ್ನು ಮೊದಲ ಕಂತಿನಲ್ಲಿ ಪಡೆಯುತ್ತಿದ್ದಾಗ ಸಿಬಿಐ ಬಲೆಗೆ ಸಿಕ್ಕಿ ಬಿದ್ದಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಪ್ರತಿಷ್ಠಿತ ಬೇಹುಗಾರಿಕಾ ಸಂಸ್ಥೆಯೊಂದರ ಅಧಿಕಾರಿಯೊಬ್ಬರು ಸೇವೆಯಲ್ಲಿರುವಾಗಲೇ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿರುವ ಘಟನೆ ಇದೇ ಮೊದಲಾಗಿದೆ ಎಂದು ಹೇಳಲಾಗಿದೆ. |