ಮುಷ್ಕರ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುವ ವಿಧಾನವಾಗಿದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದೆ.ಚೆನ್ನೈ ಮೂಲದ ಜಯನೀತಿ ಸರ್ವಜ್ಞ ಸತೀಶ್ ಕುಮಾರ್ ಎಂಬುವರು ಮುಷ್ಕರವನ್ನು ಕಾನೂನು ಬಾಹಿರ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಮಹತ್ವದ ನಿರ್ಧಾರ ತಳೆದಿದೆ. ಶ್ರೀಲಂಕಾದಲ್ಲಿ ಕದನ ವಿರಾಮ ಘೋಷಿಸುವಂತೆ ಒತ್ತಡ ಹೇರಲು ಬಿಜೆಪಿ, ಪಿಎಂಕೆ, ಎನ್‌ಸಿಪಿ ಹಾಗೂ ಎಂಡಿಎಂಕೆ ಪಕ್ಷಗಳು ಸೇರಿ ಬುಧವಾರ ತಮಿಳುನಾಡು ಬಂದ್‌ಗೆ ಕರೆ ನೀಡಿವೆ.' ನ್ಯಾಯಾಲಯ ಏನು ಮಾಡಲು ಸಾಧ್ಯ, ಭಾವನೆಗಳನ್ನು ವ್ಯಕ್ತಪಡಿಸಿವುದು ಜನರ ಸಂವಿಧಾನಬದ್ದ ಹಕ್ಕು' ಎಂದು ಮುಖ್ಯ ನ್ಯಾಯಧೀಶರಾದ ಕೆ.ಜಿ.ಬಾಲಕೃಷ್ಣನ್ ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ಆದರೆ 1997ರಲ್ಲಿ ಕೇರಳ ಹೈಕೋರ್ಟ್ ಮುಷ್ಕರದ ವಿರುದ್ಧವಾಗಿ ಐತಿಹಾಸಿಕ ತೀರ್ಪು ನೀಡಿತ್ತು. ಆ ತೀರ್ಪು ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿದ್ದು, ಕೇರಳ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ತಡೆಹಿಡಿದಿದೆ.ಇದೀಗ ಬಂದ್ ನಡೆಸುವುದು ಜನರ ಭಾವನೆಯನ್ನು ವ್ಯಕ್ತಪಡಿಸುವ ವಿಧಾನ ಎಂದು ಸುಪ್ರೀಂಕೋರ್ಟ್ ಪೀಠ ಹೇಳುವ ಮೂಲಕ, ಇಂದು ಚೆನ್ನೈನಲ್ಲಿ ನಡೆಯುತ್ತಿರುವ ಬಂದ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಬಂದ್ ಕುರಿತ ದೂರಿನ ವಿಚಾರಣೆಯನ್ನು ಫೆಬ್ರುವರಿ 16ಕ್ಕೆ ಮುಂದೂಡಿದೆ.ಸಿಜೆಐ ವರಿಷ್ಠರು ಹಾಗೂ ನ್ಯಾಯಮೂರ್ತಿಗಳಾದ ಪಿ.ಸತಶಿವಂ ಮತ್ತು ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ಪೀಠ ಕೂಡ ಮಂಗಳವಾರ, ಇದೊಂದು ಪ್ರಜಾಪ್ರಭುತ್ವ ದೇಶ, ಪ್ರತಿಯೊಬ್ಬರಿಗೂ ಅವರವರ ಹಕ್ಕುಗಳನ್ನು,ಭಾವನೆಗಳನ್ನು ವ್ಯಕ್ತಪಡಿಸುವ ಅಧಿಕಾರ ಇದೆ. ಆದರೆ ರಾಜಕೀಯ ಪಕ್ಷಗಳು ಬಂದ್ ಬಗೆಗಿನ ನ್ಯಾಯಾಂಗದ ನಿಲುವನ್ನು ಟೀಕಿಸಬೇಡಿ ಎಂದು ಎಚ್ಚರಿಸಿದರು.ಆದರೆ ಶ್ರೀಲಂಕಾದಲ್ಲಿ ತಮಿಳರ ಮೇಲೆ ಹಲ್ಲೆ, ಹತ್ಯೆ ನಡೆಯುತ್ತಿದ್ದು, ಅದನ್ನು ನಿಲ್ಲಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು ತಮಿಳುನಾಡು ಬಂದ್‌ಗೆ ಕರೆಕೊಟ್ಟಿದ್ದು, ಅದಕ್ಕೆ ತಡೆಯಾಜ್ಞೆ ನೀಡಬೇಕೆಂದು 1997ರ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದ ಸತೀಶ್ ತಗಾದೆ ತೆಗೆದಿದ್ದರು.ಆ ವಾದ ಯಾವುದೇ ಪ್ರಯೋಜನಕ್ಕೆ ಬಾರದು ಎಂದು ತರಾಟೆಗೆ ತೆಗೆದುಕೊಂಡ ಅಪೆಕ್ಸ್ ಕೋರ್ಟ್, ಏನು ನ್ಯಾಯಾಲಯ ಮುಷ್ಕರವನ್ನು ನಿಲ್ಲಿಸಲು ಸಾಧ್ಯವೆ? ಭಾರತ ಪ್ರಜಾಪ್ರಭುತ್ವ ದೇಶ ಪ್ರತಿಯೊಬ್ಬರಿಗೂ ಅವರವರ ಹಕ್ಕನ್ನು ವ್ಯಕ್ತಪಡಿಸುವ ಅಧಿಕಾರ ಇದೆ ಎಂದು ಅಭಿಪ್ರಾಯಪಟ್ಟಿತು. |