ಗುಜರಾತ್‌ನಲ್ಲಿ 2002ರಲ್ಲಿ ನಡೆದ ನರೋಡ ಪಾಟಿಯಾ ನರಮೇಧದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ವಿಚಾರಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ಮಾಯಾ ಕೊಡ್‌ನಾನಿ ವಿಚಾರಣೆಗೆ ಹಾಗೂ ಕಚೇರಿಗೆ ಗೈರುಹಾಜರಾಗಿದ್ದು, ಅವರು ತಲೆಮರೆಸಿಕೊಂಡಿರುವುದಾಗಿ ಘೋಷಿಸಿದೆ.
ಸಚಿವೆ ಕಚೇರಿಗೂ ಬಾರದೆ, ಮನೆಯಿಂದಲೂ ನಾಪತ್ತೆಯಾಗಿದ್ದು ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವುದಾಗಿ ಸಿಎನ್ಎನ್ ವರದಿ ತಿಳಿಸಿದ್ದು. ಮಾಯಾ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿವೆ.
ಮಾಯಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿ ನರೇಂದ್ರ ಮೋದಿ ಆಕೆಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್ ಮುಖಂಡ ಅರ್ಜುನ್ ಮೋದವಾಡಿಯಾ, ಗುಜರಾತ್ ನರಮೇಧ ಆಡಳಿತಾರೂಢ ಸರ್ಕಾರದ ಬಹುತೇಕ ಸಚಿವರ ಕೃಪಾಪೋಷಿತದಿಂದಲೇ ನಡೆದಿರುವುದಾಗಿ ಗಂಭೀರವಾಗಿ ಆರೋಪಿಸಿದ್ದಾರೆ.
ಅಲ್ಲದೇ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಹತ್ತಿರ 2002ರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮಾಯಾ ಅವರು ವಿಎಚ್‌ಪಿ ಮತ್ತು ಬಜರಂಗದಳ ಮುಖಂಡರ ಜೊತೆ ಸಂಪರ್ಕ ಹೊಂದಿರುವ ಸಾಕ್ಷ್ಯ ಇದೆ.
ವಿಚಾರಣೆಗೆ ಹಾಜರಾಗುವಂತೆ ಮಾಯಾ ಅವರಿಗೆ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಎರಡೂ ಬಾರಿ ಗೈರುಹಾಜರಾಗಿದ್ದರು. ಆದರೆ ಸಚಿವೆ ನಾಪತ್ತೆಯಾಗಿರುವುದಾಗಿ ಫೆ.1ರಂದು ಅಧಿಕೃತವಾಗಿ ಘೋಷಿಸಲಾಗಿತ್ತು! ಅಲ್ಲದೇ ಮಾಯಾ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಗುರುವಾರ ನ್ಯಾಯಾಲಯದ ಮುಂದೆ ಬರಲಿದೆ.
ಸಚಿವೆ ಮಾಯಾ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಆದರೆ ಅವರು ಎಲ್ಲಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಕಂದಾಯ ಸಚಿವ ಆನಂದಿಬೆನ್ ಪಟೇಲ್ ತಿಳಿಸಿದ್ದಾರೆ.
|