' ನನ್ನನ್ನು ಮುಸ್ಲಿಮ್ ವಿರೋಧಿ ಎಂದು' ಪರಿಗಣಿಸಬೇಡಿ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮುಸ್ಲಿಮ್ ಸಮುದಾಯದ ಆರೋಪಕ್ಕೆ ಸ್ಪಷ್ಟನೆ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿ ಎಂದು ಬಿಂಬಿಸಲ್ಪಟ್ಟಿದ್ದ ಕಲ್ಯಾಣ್ ಸಿಂಗ್ ಅವರು ಆ ಸಂದರ್ಭದಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಎರಡನೇ ಬಾರಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷದ ಸಖ್ಯ ಬೆಳೆಸುತ್ತಿರುವ ಕಲ್ಯಾಣ್ ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಮುಲಾಯಂ ಇಬ್ಬಗೆಯ ನಿಲುವಿನ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.ಬಿಜೆಪಿ ತೊರೆದಿರುವ ಕಲ್ಯಾಣ್ ಸಿಂಗ್ ಅವರ ನಿಲುವನ್ನು ಮುಸ್ಲಿಮ್ ಹಾಗೂ ಹಿಂದೂಗಳಿಂದ ಸಾಕಷ್ಟು ಪತ್ರಗಳು, ದೂರವಾಣಿ ಕರೆಗಳ ಮೂಲಕ ಸ್ವಾಗತಿಸಿರುವುದಾಗಿ ಅವರು ಈ ಸಂದರ್ಭದಲ್ಲಿ ಸಿಂಗ್ ತಿಳಿಸಿದರು.ತಾನು ಯಾವತ್ತೂ ಮುಸ್ಲಿಮ್ ವಿರೋಧಿಯಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿರುವ ಕಲ್ಯಾಣ್ ಸಿಂಗ್, ನನ್ನನ್ನು ಮುಸ್ಲಿಮ್ ವಿರೋಧಿ ಎಂಬಂತೆ ಕಾಣಬೇಡಿ ಎಂದಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಕ್ಷೇಮಕ್ಕಾಗಿಯೇ ತಾನು ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.ಮುಸ್ಲಿಮರು ಬಿಜೆಪಿಯ ವಿರೋಧಿಗಳೇ ವಿನಃ, ತನ್ನ ವಿರೋಧಿಗಳಲ್ಲ, ಆ ನೆಲೆಯಲ್ಲಿ ಮುಸ್ಲಿಮ್ ವಿರೋಧಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದಿರುವ ತನ್ನ ನಿರ್ಧಾರವನ್ನು ಮುಸ್ಲಿಮರು ಸ್ವಾಗತಿಸುತ್ತಾರೆಂದು ಭರವಸೆ ವ್ಯಕ್ತಪಡಿಸಿದ್ದಾರೆ.ಬಿಜೆಪಿಗೆ ರಾಜೀನಾಮೆ ನೀಡಿ ಕಲ್ಯಾಣ್ ಸಿಂಗ್ ಹೊರಬಂದ ನಂತರ, ಸಮಾಜವಾದಿ ಪಕ್ಷದ ಸಖ್ಯ ಬೆಳೆಸುತ್ತಿರುವಾಗಲೇ, ಮುಲಾಯಂ ಸಿಂಗ್ ಅವರು ಕಲ್ಯಾಣ್ ಸಿಂಗ್ ಅವರು ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣರಲ್ಲ ಎಂದು ಹೇಳಿಕೆ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ತಾನು ಕಲ್ಯಾಣ್ ಸಿಂಗ್ ಕುರಿತು ಆ ರೀತಿ ಹೇಳಿಲ್ಲ, ಅವರೊಂದಿಗೆ ತಮ್ಮ ಮೈತ್ರಿ ಇಲ್ಲ, ಕೇವಲ ಗೆಳೆತನ ಮಾತ್ರ ಎಂದು ಸ್ಪಷ್ಟನೆ ನೀಡಿದ್ದರು. |