ವಾಣಿಜ್ಯ ನಗರಿ ಮುಂಬೈ ಮೇಲೆ ಭಯೋತ್ಪಾದನೆ ದಾಳಿ ವೇಳೆ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಸಾವನ್ನಪ್ಪಿದ್ದಾನೆ ಎಂಬ ಪಾಕಿಸ್ತಾನ ಮಾಧ್ಯಮಗಳ ಆರೋಪ ನಿರಾಧಾರ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆ ಇದೀಗ ಕಸಬ್‌ನ ನೂತನ ಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಹೊಸ ಚಿತ್ರದಲ್ಲಿ ಕಸಬ್ ಬಲಗೈಗೆ ಬ್ಯಾಂಡೇಜ್ ಮಾಡಲಾಗಿದ್ದು, ಎಡಗೈಗೆ ಕೈಕೊಳ ತೊಡಿಸಿರುವ ಚಿತ್ರವನ್ನು ಮುಂಬೈ ಕ್ರೈಮ್ ಪೊಲೀಸರು ಎಲ್ಲ ಮಾಧ್ಯಮಗಳಿಗೆ ನೀಡಿದ್ದಾರೆ. ಉಗ್ರ ಕಸಬ್ ನಿಗೆ ಯಾವುದೇ ತೊಂದರೆ ಇಲ್ಲ. ಆತನ ಆರೋಗ್ಯ ಕೂಡ ಉತ್ತಮವಾಗಿದೆ. ಆದರೆ ಕಸಬ್‌ನ ನೂತನ ಭಂಗಿಯ ಈ ಚಿತ್ರವನ್ನು ಯಾವಾಗ ಮತ್ತು ಎಲ್ಲಿ ತೆಗೆಯಲಾಯಿತು ಎಂಬ ಬಗ್ಗೆ ತಿಳಿದುಬಂದಿಲ್ಲ.
ಅಲ್ಲದೇ ಕಸಬ್ ಕೈದಿಯ ವಸ್ತದಲ್ಲಿರದೆ, ಸಾಮಾನ್ಯರಂತೆ ಟಿ ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟನ್ನು ಧರಿಸಿದ್ದಾನೆ. ಮುಂಬೈ ಕ್ರೈಂ ಬ್ರ್ಯಾಂಚ್ ತನಿಖೆಗೆ ಕರೆದೊಯ್ಯುವ ಸಂದರ್ಭದಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಸಬ್‌ನ ನೂತನ ಚಿತ್ರದೊಂದಿಗೆ, ದಾಳಿಯ ಸಂದರ್ಭದಲ್ಲಿ ಉಪಯೋಗಿಸಲಾದ ಸ್ಫೋಟಕ,ಶಸ್ತ್ರಾಸ್ತ್ರಗಳ ಛಾಯಾಚಿತ್ರವನ್ನೂ ಕೂಡ ತೆಗೆಯಲಾಗಿದೆ. ಅವೆಲ್ಲ ಸ್ಫೋಟಕ ವಸ್ತುಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಇವೆಲ್ಲವೂ ಪ್ರಮುಖ ಸಾಕ್ಷಿಯಾಗಿದೆ.
ಅಲ್ಲದೇ ಕಸಬ್ ಸಾವನ್ನಪ್ಪಿರುವ ಪಾಕಿಸ್ತಾನದ ಮಾಧ್ಯಮಗಳ ವರದಿಯನ್ನು ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಆತ ಆರೋಗ್ಯವಂತನಾಗಿರುವುದಾಗಿ ಹೇಳಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಗೃಹ ಸಚಿವ ಜಯಂತ್ ಪಾಟೀಲ್ ಕೂಡ ಪಾಕಿಸ್ತಾನದ ಮಾಧ್ಯಮಗಳು ಮಾಡಿರುವ ವರದಿಯನ್ನು ನಿರಾಕರಿಸಿದ್ದರು. ಕಸಬ್ ಪೊಲೀಸ್ ವಶದಲ್ಲಿದ್ದು, ಆರೋಗ್ಯವಾಗಿದ್ದಾನೆ ಎಂದು ಸ್ಪಷ್ಟಪಡಿಸಿದ್ದರು. ಕಸಬ್ ಸತ್ತಿದ್ದಾನೆ ಎಂದು ಪಾಕಿಸ್ತಾನಕ್ಕೆ ಸಂಶಯ ಉಂಟಾದಲ್ಲಿ ತನ್ನ ರಾಯಭಾರಿ ಅಧಿಕಾರಿಗಳ ಪರಿಶೀಲನೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ಜನವರಿ 30 ರಂದೇ ಅವರು ಹೇಳಿಕೆ ನೀಡಿದ್ದರು. |