ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರನ್ನು ವಜಾಗೊಳಿಸಬೇಕೆಂದು ಮುಖ್ಯಚುನಾವಣಾ ಆಯುಕ್ತ ಗೋಪಾಲಸ್ವಾಮಿ ಅವರು ಮಾಡಿರು ಶಿಫಾರಸ್ಸಿನ ಬಗ್ಗೆ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಕೂಡ ಧ್ವನಿಗೂಡಿಸುವ ಮೂಲಕ ಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.ಇದು ಒಬ್ಬರನ್ನೊಬ್ಬರು ಹಣಿಯುವ ಯತ್ನವಾಗಿದೆ ಎಂದಿರುವ ಚಟರ್ಜಿ, ಸಂಸ್ಥೆಗಳು ತಮಗೆ ತಾವೇ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಾವು ನಮ್ಮ ಕೆಲಸವನ್ನು ಗೌರವಿಸುತ್ತ ಮುಂದುವರಿಯಬೇಕು, ಅದನ್ನು ಬಿಟ್ಟು ಕೆಸರೆಚಾಟದಲ್ಲಿ ತೊಡಗಬಾರದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.ಆ ನಿಟ್ಟಿನಲ್ಲಿ ಪ್ರತಿಯೊಂದು ಸಂಸ್ಥೆಗಳಿಗೂ ಒಂದು ಲಕ್ಷ್ಮಣರೇಖೆಯನ್ನು ಹಾಕಬೇಕಾದ ಅಗತ್ಯ ಇದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಂತಹ ರಂಪಾಟಗಳನ್ನು ಬದಿಗಿಟ್ಟು, ಭ್ರಷ್ಟಾಚಾರವನ್ನು ತಡೆಗಟ್ಟುವತ್ತ ಗಮನಹರಿಸಬೇಕಾದ ಅಗತ್ಯ ಇರುವುದಾಗಿಯೂ ಸಲಹೆ ನೀಡಿದರು. |