ಹಿಂದೂತ್ವವನ್ನು ಅಪ್ಪಿಕೊಂಡಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಯು ಟರ್ನ್ ಹೇಳಿಕೆಯೊಂದನ್ನು ನೀಡಿದ್ದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಕ್ಷಮೆಯಾಚಿಸಿದ್ದಾರೆ.1992 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡಿತ್ತು. ಸಾಕಷ್ಟು ಆರೋಪ-ಪ್ರತ್ಯಾಪರೋಪಗಳ ನಂತರ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಕಲ್ಯಾಣ್ ಸಿಂಗ್ ಇತ್ತೀಚೆಗಷ್ಟೇ ಬಿಜೆಪಿಯನ್ನು ತೊರೆದಿದ್ದರು.ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತಂತೆ ತಾನು ನೈತಿಕ ಹೊಣೆ ಹೊತ್ತು ಕ್ಷಮೆಯಾಚಿಸಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ತೊರೆದಿರುವ ಬಗ್ಗೆ ಹಿಂದೂಗಳು, ಮುಸ್ಲಿಮರು ಪತ್ರ ಹಾಗೂ ದೂರವಾಣಿ ಮೂಲಕ ಸ್ವಾಗತಿಸಿರುವುದಾಗಿ ಹೇಳಿದರು.ಬಿಜೆಪಿ ತೊರೆದಿರುವ ಕಲ್ಯಾಣ್ ಸಿಂಗ್ ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸುವ ಮೂಲಕ,ತಾನು ಯಾವತ್ತೂ ಮುಸ್ಲಿಮ ವಿರೋಧಿಯಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ನಿಜಕ್ಕೂ ಮುಸ್ಲಿಮರು ನನ್ನ ವಿರೋಧಿಗಳಲ್ಲ, ಮುಸ್ಲಿಮರು ಬಿಜೆಪಿಯ ವಿರೋಧಿಗಳು, ಆ ನಿಟ್ಟಿನಲ್ಲಿ ಕೋಮುವಾದಿ ಪಕ್ಷ ಬಿಜೆಪಿಗೆ ರಾಜೀನಾಮೆ ನೀಡಿರುವ ತನ್ನ ನಿಲುವನ್ನು ಮುಸ್ಲಿಮರು ಸ್ವಾಗತಿಸಿರುವುದಾಗಿ ತಿಳಿಸಿದರು. |